Sunday, 15th December 2024

Shiva Rajkumar: ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್‌

Shiva Rajkumar

ದುಬೈ: ಈ ಬಾರಿಯ ಸೈಮಾ (South Indian International Movie Awards) ಪ್ರಶಸ್ತಿ ಪ್ರದಾನ ಸಮಾರಂಭ ದುಬೈಯಲ್ಲಿ ಅದ್ದೂರಿಯಾಗಿ ನೆರವೇರಿದೆ. ದಕ್ಷಿಣ ಭಾರತದ ವಿವಿಧ ಚಿತ್ರರಂಗದ ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ, ನಟ, ನಟಿ, ನಿರ್ದೇಶಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ವಿತರಿಸಲಾಗಿದೆ. ಈ ವೇಳೆ ಬಾಲಿವುಡ್‌ ಸ್ಟಾರ್‌ ನಟಿ, ಮಂಗಳೂರು ಮೂಲದ ಐಶ್ವರ್ಯಾ ರೈ (Aishwarya Rai) ಅವರ ಪುತ್ರಿ ಆರಾಧ್ಯಾ ಬಚ್ಚನ್‌ (Aaradhya Bachchan) ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ (Shiva Rajkumar) ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಅಮಿತಾಭ್‌ ಬಚ್ಚನ್‌ ಮೊಮ್ಮಗಳ ವಿನಯತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಣಿರತ್ನಂ ನಿರ್ದೇಶನದ ʼಪೊನ್ನಿಯಿನ್‌ ಸೆಲ್ವಂ IIʼ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಐಶ್ವರ್ಯಾ ರೈ ತಮಿಳಿನ ಅತ್ಯುತ್ತಮ ನಟಿ (ಕ್ರಿಟಿಕ್ಸ್‌) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ಕೆಳಗೆ ಇಳಿದು ಬಂದ ಅವರು ಅಲ್ಲೇ ಇದ್ದ ಶಿವರಾಜ್‌ ಕುಮಾರ್‌ ಅವರನ್ನು ಮಾತನಾಡಿಸಿದರು. ಈ ವೇಳೆ ಪಕ್ಕದಲ್ಲೇ ಇದ್ದ ಆರಾಧ್ಯಾ ಬಚ್ಚನ್‌ ಶಿವಣ್ಣನ ಕಾಲಿಗೆರಗಿದರು. ಈ ವಿಡಿಯೊ ಇದೀಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

ಪ್ರಶಸ್ತಿ ಪಡೆದ ಐಶ್ವರ್ಯಾ ರೈ ʼಪೊನ್ನಿಯಿನ್‌ ಸೆಲ್ವಂ IIʼ ಚಿತ್ರದಲ್ಲಿನ ತಮ್ಮ ಸಹನಟ ಚಿಯಾನ್‌ ವಿಕ್ರಂ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿದು ಬಂದರು. ಇದೇ ವೇಳೆ ಅಲ್ಲೇ ನಿಂತಿದ್ದ ಆರಾಧ್ಯಾ ತಮ್ಮ ತಾಯಿಯನ್ನು ಬಿಗಿದಪ್ಪಿ ಅಭಿನಂದನೆ ಸಲ್ಲಿಸಿದರು. ಇನ್ನೇನು ತಮ್ಮ ಸೀಟಿಗೆ ಹೋಗಿ ತಾಯಿ-ಮಗಳು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಶಿವರಾಜ್‌ ಕುಮಾರ್‌ ಅವರು ವಿಕ್ರಂ ಮತ್ತಿತರರ ಜತೆ ಮಾತನಾಡುತ್ತಿದ್ದರು.

ಶಿವರಾಜ್‌ ಕುಮಾರ್‌ ಅವರನ್ನು ಗಮನಿಸಿದ ಕೂಡಲೆ ಅಲ್ಲಿಗೆ ಧಾವಿಸಿದ ಐಶ್ವರ್ಯಾ ರೈ ಅವರಿಗೆ ಶೇಕ್‌ ಹ್ಯಾಂಡ್‌ ನೀಡಿ ನಗು ನಗುತ್ತಾ ಮಾತನಾಡಿಸಿದರು. ಜತೆಗಿದ್ದ ಮಗಳಿಗೆ ಕಾಲಿಗೆ ಬೀಳುವಂತೆ ಸೂಚಿಸಿದರು. ಕೂಡಲೇ ಆರಾಧ್ಯಾ ಬಾಗಿ ಶಿವರಾಜ್‌ ಕುಮಾರ್‌ ಅವರ ಕಾಲಿಗೆ ನಮಸ್ಕರಿಸಿದರು. ಶಿವಣ್ಣ ಮನತುಂಬಿ ಆಶಿರ್ವದಿಸಿದರು. ಐಶ್ವರ್ಯಾ ತಮ್ಮ ಮಗಳಿಗೆ ಸಂಸ್ಕೃತಿಯನ್ನೂ ಪರಿಚಯಿಸಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ʼʼವಾವ್‌. ಈ ವಿಡಿಯೊ ನೋಡಿ ತುಂಬ ಸಂತಸವಾಯ್ತು. ನಮ್ಮ ಆಚಾರ-ವಿಚಾರ ಮೈಗೂಡಿಸಿಕೊಂಡಿರುವ ಆರಾಧ್ಯಾ ಅಭಿನಂದನಾರ್ಹರು. ಇಂತಹ ವಿನಮ್ರ ಹದಿಹರೆಯದವರು ಅಪರೂಪʼʼ ಎಂದು ಒಬ್ಬರು ಹೆಳಿದ್ದಾರೆ. ʼʼಐಶ್ವರ್ಯಾ ರೈ ತಮ್ಮ ಮಗಳಿಗೆ ಉತ್ತಮ ಸಂಸ್ಕಾರ ಕಲಿಸಿದ್ದಾರೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಐಶ್ವರ್ಯಾ ತಮ್ಮ ಮಗಳಿಗೆ ಪ್ರೀತಿಯನ್ನು ನೀಡುವ ಜತೆಗೆ ಸಂಸ್ಕೃತಿಯ ಪರಿಚಯವನ್ನೂ ಮಾಡಿಸುತ್ತಿದ್ದಾರೆ. ತಾಯಿ-ಮಗಳ ಸಂಬಂಧ ಮಾದರಿʼʼ ಎಂದು ಮಗದೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಒಂದೇ ಫ್ರೇಮ್‌ನಲ್ಲಿ ಐಶ್ವರ್ಯಾ ರೈ, ವಿಕ್ರಂ ಮತ್ತು ಶಿವರಾಜ್‌ ಕುಮಾರ್‌ ಅವರನ್ನು ನೋಡಲು ಖುಷಿಯಾಗುತ್ತದೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಸಮಾರಂಭದಲ್ಲಿ ಡಾ.ಶಿವರಾಜ್‌ ಕುಮಾರ್ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2007 ವಿವಾಹಿತರಾದ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ದಂಪತಿಗೆ 2011ರಲ್ಲಿ ಆರಾಧ್ಯಾ ಜನಿಸಿದರು.

ಈ ಸುದ್ದಿಯನ್ನೂ ಓದಿ: SIIMA awards 2024 : ಕಾಟೇರ, ಸಪ್ತಸಾಗರದಾಚೆ ಎಲ್ಲೊ ಸಿನಿಮಾಗೆ ಹಲವು ಪ್ರಶಸ್ತಿಗಳು