ಬೆಂಗಳೂರು: ʼಭೈರತಿ ರಣಗಲ್ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಹ್ಯಾಟ್ರಿಕ್ ಹೀರೋ ಡಾ. ಶಿವ ರಾಜ್ಕುಮಾರ್ (Shiva Rajkumar) ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ‘ಸೆಂಚುರಿ ಸ್ಟಾರ್’ ಶಿವರಾಜ್ ಕುಮಾರ್ ಇದೀಗ ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ (Pavan Wadeyar) ಜತೆ ಕೈ ಜೋಡಿಸಿದ್ದಾರೆ. ಪವನ್ ಇದೀಗ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಖುಷಿಯಲ್ಲಿದ್ದಾರೆ.
ಬರೀ ನಿರ್ದೇಶಕರಾಗಿ ಮಾತ್ರವಲ್ಲದೇ ಪವನ್ ಒಡೆಯರ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ʼಡೊಳ್ಳುʼ ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು ಮೊದಲ ಚಿತ್ರದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಅವಸ್ತಿ V/S ಅವಸ್ತಿ’ ಎಂಬ ಬಾಲಿವುಡ್ ಚಿತ್ರ ನಿರ್ಮಿಸಿರುವ ಪವನ್ ಒಡೆಯರ್ ಸದ್ಯ ‘ವೆಂಕ್ಯಾ’ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ನಡಿ 4ನೇ ಚಿತ್ರ ನಿರ್ಮಿಸುತ್ತಿದ್ದಾರೆ. ಅದು ಶಿವಣ್ಣನಿಗೆ ಎನ್ನುವುದೇ ವಿಶೇಷ.
2025ಕ್ಕೆ ಶಿವಣ್ಣ ಹಾಗೂ ಪವನ್ ಕಾಂಬೋದ ಹೊಸ ಚಿತ್ರ ಟೇಕಾಫ್ ಆಗಲಿದೆ. ಕರುನಾಡ ಕಿಂಗ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಂತಸ ಹಂಚಿಕೊಂಡರು ಪವನ್ ಒಡೆಯರ್, “ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಚಿತ್ರ ಮಾಡಬೇಕೆಂಬ ಕನಸು ಇರುತ್ತದೆ. ನನ್ನ ಈ ಕನಸು ಈಗ ನನಸಾಗುತ್ತದೆ. ಥ್ರಿಲ್ಲರ್ ಜತೆಗೆ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್ಟೈನರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯ ರಿವೀಲ್ ಮಾಡಲು ಆಗುತ್ತಿಲ್ಲ. ಆದರೆ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಲಿದ್ದಾರೆ” ಎಂದು ತಿಳಿಸಿದ್ದಾರೆ.
ಒಡೆಯರ್ ಮೂವೀಸ್ ಬ್ಯಾನರ್ನಡಿ ಅಪೇಕ್ಷಾ ಪವನ್ ಒಡೆಯರ್ ಹಾಗೂ ಪವನ್ ಒಡೆಯರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ನಾ ಕ್ರಿಯೇಟಿವ್ ನಿರ್ಮಾಣದಲ್ಲಿ ಸಾಥ್ ಕೊಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: Pro Ludo Star League: ಜನವರಿಯಲ್ಲಿ ಆರಂಭವಾಗಲಿದೆ ‘ಪ್ರೊ ಲುಡೋ ಸ್ಟಾರ್ ಲೀಗ್’; ಹಿರಿತೆರೆ, ಕಿರುತೆರೆ ಕಲಾವಿದರು ಭಾಗಿ