ಮುಂಬೈ: ಗೋಲ್ಮಾಲ್ 3, ಗೋಲ್ಮಾಲ್ ರಿಟರ್ನ್ಸ್ ಸೇರಿದಂತೆ ಹಲವು ಕಾಮಿಡಿ ಸಿನಿಮಾಗಳ ಮೂಲಕ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜನಪ್ರಿಯ ನಟನ ಹೃದಯಾಘಾತದ ಸುದ್ದಿಯಿಂದ ಅಭಿಮಾನಿಗಳೂ ಸೇರಿದಂತೆ ಬಾಲಿವುಡ್ ಬೆಚ್ಚಿಬಿದ್ದಿದೆ. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ನಟ ಶ್ರೇಯಸ್ ತಲ್ಪಾಡೆ ಸ್ಥಿತಿ ಸ್ಥಿರವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಡಿ.14 ರಂದು (ಗುರುವಾರ) ಮುಂಬೈನಲ್ಲಿ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ವೆಲ್ಕಮ್ ಟು ದಿ ಜಂಗಲ್ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಸಂಜೆ ವೇಳೆ ನಟನಿಗೆ ಅಸ್ವಸ್ಥತೆ ಉಂಟಾಗಿ, ಹೃದಯಾಘಾತವಾಯಿತು ಎಂದು ವರದಿಯಾಗಿದೆ.
ಶ್ರೇಯಸ್ ತಲ್ಪಾಡೆ ಅವರು ಅಪ್ನಾ ಸಪ್ನಾ ಮನಿ ಮನಿ, ಡೋರ್, ಓಂ ಶಾಂತಿ ಓಂ, ಗೋಲ್ಮಾಲ್ ರಿಟರ್ನ್ಸ್ ಮತ್ತು ವೆಲ್ಕಮ್ ಟು ಸಜ್ಜನ್‌ಪುರದಂತಹ ಹಲವು ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ.
ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗಪ್ಪಳಿಸಲಿದೆ. ಜೊತೆಗೆ, ಬಾಲಿವುಡ್ ಕಿಲಾಡಿ ಸೇರಿದಂತೆ ಬಹುತಾರಾಗಣದ ವೆಲ್ಕಮ್ ಟು ದಿ ಜಂಗಲ್ ಸಿನಿಮಾದ ಭಾಗವಾಗಿದ್ದಾರೆ.