Friday, 22nd November 2024

Sandalwood News: ಭಾರತ-ಬಾಂಗ್ಲಾ ಯುದ್ಧದ ಕಥೆ ಹೇಳುವ ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರದ ಹಾಡು ರಿಲೀಸ್‌

Sandalwood News

ಬೆಂಗಳೂರು: ʼʼಇಂದಿನ ಕನ್ನಡ ಚಿತ್ರರಂಗಕ್ಕಿಂತಲೂ ರಂಗಭೂಮಿ ಚೆನ್ನಾಗಿದೆ, ಸುರಕ್ಷಿತವಾಗಿದೆʼʼ ಎಂದು ಹಿರಿಯ ನಟ, ಬರಹಗಾರ ಪ್ರಕಾಶ್‌ ಬೆಳವಾಡಿ (Prakash Belawadi) ಅಭಿಪ್ರಾಯಪಟ್ಟರು (Sandalwood News).

ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಆಯೋಜಿಸಿದ್ದ ʻಸಿಗ್ನಲ್‌ ಮ್ಯಾನ್‌ 1971ʼ (Signal Man 1971) ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ʼʼಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದರೆ ರಂಗಭೂಮಿಯಲ್ಲಿ ಇಂದಿಗೂ ನಮ್ಮ ಕೆಲಸಕ್ಕೆ ಬೇಕಾದ ಬೆಂಬಲ ಸಿಗುತ್ತಿದೆ, ಚಿತ್ರರಂಗದಲ್ಲೂ ಇಂತಹ ವಾತಾವರಣ ಮತ್ತೆ ಬೇಗ ಬರಲಿʼʼ ಎಂದು ಆಶಿಸಿದ್ದಾರೆ. ʻಸಿಗ್ನಲ್‌ ಮ್ಯಾನ್‌ 1971ʼ ಚಿತ್ರ ಭಾರತ-ಬಾಂಗ್ಲಾ ನಡುವಿನ ಯುದ್ಧದ ಸಂದರ್ಭದ ಕಥಾಹಂದರವನ್ನು ಒಳಗೊಂಡಿದೆ. ಇದರಲ್ಲಿ ಎರಡೇ ಪ್ರಮುಖ ಪಾತ್ರಗಳಿವೆ. ಚಿತ್ರವನ್ನು ಸಾಧ್ಯವಾದಷ್ಟು ನೈಜವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇವೆ. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಬೆಂಬಲಿಸಿʼʼ ಎಂದು ಮನವಿ ಮಾಡಿದರು.

ಚಾಲ್ಸ್‌ ಡಿಕನ್ಸ್‌ ಕಾದಂಬರಿ ಆಧಾರಿತ ಚಿತ್ರ

ನಿರ್ದೇಶಕ ಕೆ.ಶಿವರುದ್ರಯ್ಯ ಮಾತನಾಡಿ, ʼʼಸಿಗ್ನಲ್‌ ಮ್ಯಾನ್‌ 1971ʼ ಚಿತ್ರ ಚಾಲ್ಸ್‌ ಡಿಕನ್ಸ್‌ ಕಾದಂಬರಿ ಆಧಾರಿತ ಚಿತ್ರ. ಮೊದಲನೆ ಮಹಾಯುದ್ಧದ ಸಂದರ್ಭದಲ್ಲಿ ಮೈಸೂರಿನ ಮಹಾರಾಜರು ಯೂರೋಪಿನ ಸೇನೆಗೆ ಬೆಂಬಲ ನೀಡಿ ಕಳುಹಿಸಿದ ʻಮೈಸೂರು ಲ್ಯಾನ್ಸರ್‌ʼ ತಂಡ ಗೆದ್ದು ಬಂದದ್ದನ್ನು ನೆನಪಿಸುವ ಒಂದು ಹಾಡನ್ನು ಚಿತ್ರೀಕರಣ ಮಾಡಿದ್ದೇವೆ. ಅದನ್ನು ಮೈಸೂರಿನಲ್ಲೇ ರಾಜವಂಶಸ್ಥರಿಂದ ಬಿಡುಗಡೆ ಮಾಡಿಸುವ ಉದ್ದೇಶ ಹೊಂದಿದ್ದೆವು. ಅದು ಇಂದು ಯಶಸ್ವಿಯಾಗಿದೆ. ಅದನ್ನು ರಾಜವಂಶಸ್ಥರೇ ಬಿಡುಗಡೆ ಮಾಡಿರುವುದು ಮತ್ತಷ್ಟು ಸಂತೋಷ ತಂದಿದೆʼʼ ಎಂದು ಹೇಳಿದರು.

https://www.instagram.com/p/C8EJgI8oU6o/?utm_source=ig_web_copy_link&igsh=MzRlODBiNWFlZA==

ʼʼಊಟಿಯ ರೈಲ್ವೆ ಮಾರ್ಗದಲ್ಲಿ ರೈಲ್ವೆ ಸ್ಟೇಷನ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಒಂದು ದಿನಕ್ಕೆ ರೈಲು 8 ಬಾರಿ ಈ ಮಾರ್ಗದಲ್ಲಿ ಬರುತ್ತಿತ್ತು. ಪ್ರತೀ ಬಾರಿ ಕ್ಯಾಮೆರಾ, ಲೈಟ್ಸ್‌ಗಳನ್ನು ಟ್ರ್ಯಾಕ್‌ನಿಂದ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಬೇಕಿತ್ತು. ಮಳೆ, ಚಳಿ ಎನ್ನದೆ ಚಿತ್ರೀಕರಣ ಮಾಡಿದ್ದೇವೆ. ಕನ್ನಡ ಪ್ರೇಕ್ಷಕರು ಚಿತ್ರ ನೋಡುವ ಮೂಲಕ ಪ್ರೋತ್ಸಾಹ ನೀಡಬೇಕುʼʼ ಎಂದು ಕೇಳಿಕೊಂಡರು.

ಮಹಾರಾಜರು ಹಾಗೂ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿ, ʼʼಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಜರು ಮಾಡಿದ ಕಾರ್ಯಗಳನ್ನು ನೆನಪು ಮಾಡಿಕೊಂಡು ಹಾಡಿನ ಮೂಲಕ ತೋರಿಸಿದ್ದು ಸಂತೋಷವಾಗಿದೆ. ನಿಮ್ಮ ಸಿನಿಮಾವನ್ನು ಅರಮನೆಯ ಎಲ್ಲರೂ ನೋಡುತ್ತೇವೆ. ಚಿತ್ರತಂಡಕ್ಕೆ ಶುಭವಾಗಲಿʼʼ ಎಂದು ಹಾರೈಸಿದರು.

ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಬರೆದ ʻಮೈಸೂರು ನಮ್ಮ ಅರಸರ ಮೈಸೂರು…ʼ ಎಂಬ ಗೀತೆಗೆ ವಿಜಯ ಪ್ರಕಾಶ್‌ ಹಾಗೂ ಪಲ್ಲವಿ ಹಾಡಿದ್ದಾರೆ. ಔಸಿಪಚ್ಚನ್ ಸಂಗೀತ ನೀಡಿದ್ದಾರೆ. ಹಿಂದೂಸ್ತಾನ್‌ ಮುಕ್ತ ಮೀಡಿಯಾ ಎಂಟರ್‌ಟೈನರ್‌ ಬ್ಯಾನರ್‌ ಅಡಿಯಲ್ಲಿ ಬಿ.ವಿ.ಗಣೇಶ್‌ ಪ್ರಭು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಂಗಭೂಮಿ ನಟ ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ನಟರಂಗ ಮುಂತಾದವರು ಅಭಿನಯಿಸಿದ್ದಾರೆ.