Sunday, 15th December 2024

ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಸ್ಟಂಟ್ ಮ್ಯಾನ್ ಮಾಸ್ಟರ್ ಸಾವು

ಚೆನ್ನೈ: ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಆದ ಅವಘಡದಲ್ಲಿ ಸ್ಟಂಟ್ ಮ್ಯಾನ್ ಮಾಸ್ಟರ್ ಮೃತಪಟ್ಟಿದ್ದಾರೆ.
ಸುರೇಶ್ (54) ಮೃತ ಸ್ಟಂಟ್ ಮ್ಯಾನ್. ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ‘ವಿಡು ತಲೈ’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ರೈಲು ದುರಂತದ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಸುರೇಶ್ ಹಾಗೂ ಇತರ ಸ್ಟಂಟ್ ಮ್ಯಾನ್ ಗಳನ್ನು ಹಗ್ಗದಲ್ಲಿ ಕ್ರೇನ್ ಗೆ ಕಟ್ಟಲಾಗಿತ್ತು.

ಅನಿರೀಕ್ಷಿತವಾಗಿ ಕ್ರೇನ್ ನಿಂದ ಹಗ್ಗ ತುಂಡಾಗಿ ಸುರೇಶ್ ಅವರು ಬಿದ್ದಿದ್ದಾರೆ. ಸುಮಾರು 20 ಅಡಿ ಎತ್ತರದಿಂದ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾ ಗಿತ್ತು. ʼವಿಡುತಲೈʼ ಚಿತ್ರದಲ್ಲಿ ಸೂರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಜಯ್ ಸೇತುಪತಿಯೂ ಬಣ್ಣ ಹಚ್ಚಿದ್ದಾರೆ.

ಒಟ್ಟೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಮತ್ತು ನಟ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಬ್ಯಾನರ್​ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.