ಮಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ನಟಿ ಸೋನಲ್ ಮೊಂಥೆರೋ (Sonal Monteiro) ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ (Tarun-Sonal Wedding).
ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರದ್ದು ಅಂತರ್ಧಮೀಯ ವಿವಾಹ. ಹೀಗಾಗಿ ಮೊದಲೇ ನಿಶ್ಚಿಸಿದಂತೆ ಎರಡೂ ಸಂಪ್ರದಾಯದ ಪ್ರಕಾರ ಮದುವೆ ನಡೆದಿದೆ. ಇವರು ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇದೀಗ ಸೋನಲ್ ಅವರ ಹುಟ್ಟೂರು ಮಂಗಳೂರಿನ ಚರ್ಚ್ ಒಂದರಲ್ಲಿ ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಮತ್ತೆ ವಿವಾಹವಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೋನಲ್ ಮತ್ತು ತರುಣ್ ಶುಭ್ರ ಬಿಳಿಬಣ್ಣದ ಉಡುಗೆಯಲ್ಲಿ ಮಿಂಚಿದರು.
ʼರಾಬರ್ಟ್ʼ ಚಿತ್ರದ ಮೂಲಕ ಪರಿಚಯ
ಇವರಿಬ್ಬರ ನಡುವೆ ಪರಿಚಯವಾಗಲು ಕಾರಣವಾಗಿದ್ದು 2021ರಲ್ಲಿ ತೆರೆಕಂಡ ʼರಾಬರ್ಟ್ʼ ಸಿನಿಮಾ. ದರ್ಶನ್ ನಾಯಕನಾಗಿದ್ದ ಈ ಚಿತ್ರವನ್ನು ನಿರ್ದೇಶಿಸಿದ್ದು ತರುಣ್ ಸುಧೀರ್. ಈ ಸಿನಿಮಾದಲ್ಲಿ ಸೋನಲ್ ಮೊಂಥೆರೋ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ನಡುವೆ ಪ್ರೀತಿ ಮೂಡಲು ಒಂದು ರೀತಿಯಲ್ಲಿ ದರ್ಶನ್ ಕಾರಣ ಎಂದು ತರುಣ್ ಈ ಹಿಂದೆ ಹೇಳಿದ್ದರು.
ʻʻರಾಬರ್ಟ್ʼ ಸೆಟ್ ಅಲ್ಲಿ ಲವ್ ನಮ್ಮ ಮಧ್ಯೆ ಪ್ರೀತಿ ಮೂಡಿರಲಿಲ್ಲ. ಪ್ರೊಫೆಷನಲ್ ರಿಲೇಶನ್ ಶಿಪ್ ಇತ್ತು. ಆಗಾಗ ಮೆಸೇಜ್ ಮಾಡುತ್ತಿದ್ದೆವಷ್ಟೆ. 2023ರಲ್ಲಿ ಇಬ್ಬರ ನಡುವೆ ಬಾಂಡಿಂಗ್ ಬೆಳೆದಿದ್ದು. ದರ್ಶನ್ ಆಗಾಗ, ಸೋನಲ್‌ಗೆ ಮಾತ್ರ ಚೆನ್ನಾಗ್ ಫ್ರೇಮ್ ಇಡ್ತಿಯಾ ಅಂತ ತಮಾಷೆ ಮಾಡುತ್ತಿದ್ದರು. ಸೋನಲ್‌ನ ಲವ್ ಮಾಡ್ತಿದೀಯ ಎಂದು ರೇಗಿಸುತ್ತಿದ್ದರು. ನಂತರ ಮದುವೆ ಆಗ್ತೀಯಾ? ಎಂದು ಕೇಳತೊಡಗಿದ್ದರು. ʼಕಾಟೇರʼ ಸೆಟ್‌ನಲ್ಲೂ ದರ್ಶನ್ ಹಾಗೂ ಕೆಲವರು ಸೋನಲ್ ಹೆಸರಲ್ಲಿ ರೇಗಿಸುತ್ತಿದ್ದರು. ಕೊನೆಗೂ ಇಬ್ಬರೂ ಮಾತನಾಡಿ ಮನೆಯವರನ್ನು ಮದುವೆಗೆ ಒಪ್ಪಿಸಿದ್ವಿʼʼ ಎಂದು ತಿಳಿಸಿದ್ದರು. ತರುಣ್ ಜೈಲಿಗೆ ಹೋಗಿ ದರ್ಶನ್‌ಗೆ ಆಮಂತ್ರಣ ಪತ್ರಿಕೆ ನೀಡಿ ಬಂದಿದ್ದರು.
ಬಹುಭಾಷಾ ನಟಿ
ಮಂಗಳೂರು ಮೂಲದ ಸೋನಲ್ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಜತೆಗೆ ತುಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ತೆರೆಕಂಡ ʼಎಕ್ಕ ಸಕ್ಕʼ ಎನ್ನುವ ತುಳು ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. 2018ರಲ್ಲಿ ತೆರೆಕಂಡ ʼಅಭಿಸಾರಿಕೆʼ ಇವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ʼಪಂಚತಂತ್ರʼ, ʼಗರಡಿʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾ ಇನ್ನಷ್ಟೇ ತೆರೆ ಕಾಣಬೇಕಿದೆ. ಸದ್ಯ ಅವರು ʼಬುದ್ಧಿವಂತ 2ʼ ಮತ್ತು ʼಮಾರ್ಗರೇಟ್ ಲವರ್ ಆಫ್ ರಾಮಾಚಾರಿʼ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ನಟ, ನಿರ್ದೇಶಕ
ಸ್ಯಾಂಡಲ್‌ವುಡ್ ಹಿರಿಯ ನಟ ಸುಧೀರ್ ಅವರ ಪುತ್ರ ತರುಣ್ ಆರಂಭದಲ್ಲಿ ಬಾಲನಟನಾಗಿ, ನಾಯಕನಾಗಿ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. 2017ರಲ್ಲಿ ಬಿಡುಗಡೆಯಾದ ʼಚೌಕʼ ಸಿನಿಮಾ ಮೂಲಕ ನಿರ್ದೇಶಕರಾದರು. ಬಳಿಕ ದರ್ಶನ್ ಅಭಿನಯದ ʼರಾಬರ್ಟ್ʼ, ʼಕಾಟೇರʼ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.