Thursday, 14th November 2024

The Great Indian Kapil Show: ಬೆಂಗಾಲಿಗಳನ್ನು ‘ಟಚ್‌’ ಮಾಡಿ ಕೈ ಸುಟ್ಟುಕೊಂಡ ‘ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ’ ಟೀಂ; ಏನಿದು ಪ್ರಕರಣ?

ಮುಂಬೈ: ನಟ ಮತ್ತು ಕಾಮಿಡಿಯ್‌ ಕಪಿಲ್‌ ಶರ್ಮಾ (Kapil Sharma) ನಡೆಸಿಕೊಡುತ್ತಿರುವ ಹಾಸ್ಯ ಕಾರ್ಯಕ್ರಮ ʼದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋʼಗೆ (The Great Indian Kapil Show) ಲೀಗಲ್‌ ನೊಟೀಸ್‌ (Legal Notice) ನೀಡಲಾಗಿದೆ. ಬೆಂಗಾಲಿ ಜನರ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಟಾಗೋರ್‌ (Rabindranath Tagore) ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಆರೋಪದಲ್ಲಿ ಈ ಕಾರ್ಯಕ್ರಮಕ್ಕೆ ನ. 1ರಂದು ಲೀಗಲ್‌ ನೊಟೀಸ್‌ ನೀಡಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಬೋಂಗೋ ಭಾಷಿ ಮಹಾಸಭಾ ಫೌಂಡೇಶನ್‌ (BBMF)ನ ಅಧ್ಯಕ್ಷ ಡಾ. ಮೊಂಡೊಲ್‌ ಅವರು ತಮ್ಮ ಕಾನೂನು ಸಲಹೆಗಾರರಾಗಿರುವ ನೃಪೇಂದ್ರ ಕೃಷ್ಣ ರಾಯ್‌ ಮೂಲಕ ಈ ನೊಟೀಸ್‌ ನೀಡಿದ್ದಾರೆ.

ʼದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋʼ (The Great Indian Kapil Show) ಕಾರ್ಯಕ್ರಮದ ಕೆಲವೊಂದು ಭಾಗಗಳಲ್ಲಿ ಮಹಾನ್‌ ಕವಿ ರವೀಂದ್ರನಾಥ ಟಾಗೋರ್‌ ಅವರಿಗೆ ಅಗೌರವವನ್ನು ತೋರಲಾಗಿದೆ. ಮಾತ್ರವಲ್ಲದೇ ಭಾರತ ಹಾಗೂ ವಿಶ್ವಾದ್ಯಂತವಿರುವ ಬೆಂಗಾಲಿ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಕಾರ್ಯಕ್ರಮ ಮೂಡಿ ಬಂದಿದೆ ಎಂದು ಈ ನೊಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಲೀಗಲ್‌ ನೊಟೀಸ್‌ಗೆ ಪ್ರತಿಕ್ರಿಯಿಸಿರುವ ಕಾರ್ಯಕ್ರಮದ ಆಯೋಜಕರು, ʼʼಮಹೋನ್ನತ ಕವಿ ಮತ್ತು ಸಾಹಿತಿಯಾಗಿರುವ ರವೀಂದ್ರನಾಥ ಟಾಗೋರ್‌ ಅವರಿಗೆ ಮತ್ತು ಅವರ ಕಾರ್ಯಗಳಿಗೆ ಯಾವುದೇ ರೀತಿಯ ಅಗೌರವ ತೋರಿಸುವ ಉದ್ದೇಶ ನಮಗಿಲ್ಲ, ʼದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋʼ ಎಂಬುದು ಒಂದು ಹಾಸ್ಯ ಕಾರ್ಯಕ್ರಮವಾಗಿದ್ದು ಕೇವಲ ಮನೋರಂಜನೆಯಷ್ಟೇ ಇದರ ಉದ್ದೇಶವಾಗಿದೆ ಹಾಗೂ ಸ್ಕ್ರಿಪ್ಟ್‌ ಆಧಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿಗೆ ಅಥವಾ ಸಮುದಾಯವನ್ನು ಇದರಲ್ಲಿ ಟಾರ್ಗೆಟ್‌ ಮಾಡಲಾಗುವುದಿಲ್ಲʼʼ ಎಂದು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Tesla Car Accident: ಟೆಸ್ಲಾ ಕಾರಿಗೆ ಬೆಂಕಿ; ʼಎಲೆಕ್ಟ್ರಾನಿಕ್‌ ಡೋರ್‌ʼ ಕೈಕೊಟ್ಟ ಕಾರಣ ನಾಲ್ವರ ಸಜೀವ ದಹನ

ಇದಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್‌ ಅವರ ಪ್ರೊಡಕ್ಷನ್‌ ಹೌಸ್‌ಗೂ ಲೀಗಲ್‌ ನೊಟೀಸ್‌ ಸಿಕ್ಕಿದೆ ಎಂಬ ಗುಲ್ಲು ಇದೀಗ ಹಬ್ಬಿದ್ದು, ಕೂಡಲೇ ಖಾನ್‌ ಅವರ ಪ್ರೊಡಕ್ಷ್‌ ಹೌಸ್‌ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಕಪಿಲ್‌ ಶೋದಿಂದ ಅಂತರವನ್ನು ಕಾಯ್ದುಕೊಂಡಿದೆ.

ಈ ಕುರಿತಾಗಿ ಸಲ್ಮಾನ್‌ ಅವರ ಲೀಗಲ್‌ ಟೀಂ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಕೆಲವೊಂದು ಮಾಧ್ಯಮಗಳು ಸಲ್ಮಾನ್‌ ಖಾನ್/ ಎಸ್.ಕೆ.ಟಿವಿಗೆ ನೊಟೀಸ್‌ ಸಿಕ್ಕಿದೆ ಎಂದು ವರದಿ ಮಾಡುತ್ತಿವೆ. ಆದರೆ ಇದು ಸತ್ಯಕ್ಕೆ ದೂರವಾದು. ಯಾಕೆಂದರೆ ನಾವು ಯಾವುದೇ ರೀತಿಯಲ್ಲಿ ನೆಟ್‌ಫ್ಲಿಕ್ಸ್‌ನ ʼದಿ ಗ್ರೇಟ್‌ ಇಂಡಿಯನ್ ಕಪಿಲ್‌ ಶೋʼದೊಂದಿಗೆ ಸಂಬಂಧವನ್ನು ಹೊಂದಿಲ್ಲʼʼ ಎಂದು ತಿಳಿಸಿದೆ.

ಒಟ್ಟಿನಲ್ಲಿ ತಮ್ಮ ವೈವಿಧ್ಯಮಯ ಹಾಸ್ಯ ಕಾನ್ಸೆಪ್ಟ್‌ ಗಳ ಮೂಲಕ ಜನರನ್ನು ಮನರಂಜಿಸುವ ಕಪಿಲ್‌ ಶೋ ಇದೀಗ ಬೆಂಗಾಲಿಗಳ ಸುದ್ದಿಗೆ ಹೋಗಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.