Thursday, 12th December 2024

The Lady Killer: 2023ರ ಅತಿದೊಡ್ಡ ಫ್ಲಾಪ್ ಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆ

Lady Killer

ಅಜಯ್ ಬಹ್ಲ್ (Ajay Bahl) ನಿರ್ದೇಶನದ 2023ರ ಅತಿದೊಡ್ಡ ಫ್ಲಾಪ್ ಚಿತ್ರ ದಿ ಲೇಡಿ ಕಿಲ್ಲರ್ (The Lady Killer) ಯೂಟ್ಯೂಬ್ ನಲ್ಲಿ (youtube channel) ಯಾವುದೇ ಸದ್ದುಗದ್ದಲವಿಲ್ಲದೆ ಬಿಡುಗಡೆಯಾಗಿದೆ.

2022ರ ಏಪ್ರಿಲ್ ನಿಂದ ಶೂಟಿಂಗ್ ಪ್ರಾರಂಭಿಸಿದ ದಿ ಲೇಡಿ ಕಿಲ್ಲರ್ ಚಿತ್ರವನ್ನು 45 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅರ್ಜುನ್ ಕಪೂರ್ (Arjun Kapoor) ಮತ್ತು ಭೂಮಿ ಫೆಡ್ನೇಕರ್ (Bhumi Pednekar) ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು.

ವಿಶ್ವದಾದ್ಯಂತ ತೆರೆ ಕಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 1 ಲಕ್ಷ ರೂ. ಗಿಂತಲೂ ಕಡಿಮೆ ಆದಾಯ ಗಳಿಸಲು ಸಾಧ್ಯವಾಯಿತು. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ನಷ್ಟ ಅನುಭವಿಸಿದ ಚಿತ್ರವಾಗಿ ದಾಖಲೆ ಬರೆಯಿತು. ಈಗ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಯೂಟ್ಯೂಬ್‌ನಲ್ಲಿ ಲೇಡಿ ಕಿಲ್ಲರ್

ದಿ ಲೇಡಿ ಕಿಲ್ಲರ್ ಬಿಡುಗಡೆಯಾದ ಸುಮಾರು ಒಂದು ವರ್ಷದ ಅನಂತರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳು ತಮ್ಮ ಒಟಿಟಿ ಹಕ್ಕುಗಳನ್ನು ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಿ ದಾಖಲೆ ನಿರ್ಮಿಸುತ್ತವೆ. ಆದರೆ ಇದೇ ಮೊದಲ ಬಾರಿಗೆ ಈ ಚಿತ್ರ ಒಟಿಟಿಯಲ್ಲಿ ಉಚಿತವಾಗಿ ಬಿಡುಗಡೆಯಾಗಿದೆ. ಒಟಿಟಿಯ ಉಚಿತವಾಗಿ ಬಿಡುಗಡೆಯಾದ ಮೊದಲ ಬಾಲಿವುಡ್ ಚಿತ್ರ ಇದಾಗಿದೆ.

ಲೇಡಿ ಕಿಲ್ಲರ್ ವಿಫಲಕ್ಕೆ ಕಾರಣ

ಪ್ರೇಕ್ಷಕರು ಈ ಚಿತ್ರದ ಹೆಸರನ್ನು ಕೇಳಿಲ್ಲ. ಯಾಕೆಂದರೆ ಈ ಚಿತ್ರದ ಬಗ್ಗೆ ಯಾವುದೇ ಪ್ರಚಾರವೂ ಇರಲಿಲ್ಲ. ಅನೇಕ ಪರದೆಗಳಲ್ಲಿ ಬಿಡುಗಡೆಯನ್ನೂ ಮಾಡಿಲ್ಲ. ಇದು ಮಾತ್ರವಲ್ಲದೆ ನಿರ್ಮಾಪಕರು ಈ ಚಿತ್ರವನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡದೆ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಿದ್ದಾರೆ ಎಂಬ ಚರ್ಚೆಯೂ ನಡೆದಿದೆ.

ಚಿತ್ರೀಕರಣ ಪೂರ್ಣಗೊಳಿಸದೆ ನಟರು ನಿರ್ಗಮಿಸಿದ್ದರಿಂದ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಚಿತ್ರೀಕರಿಸಲಾಗಿಲ್ಲ ಎಂದು ನಿರ್ದೇಶಕರು ಚಲನಚಿತ್ರ ವಿಮರ್ಶಕರಿಗೆ ದೃಢಪಡಿಸಿದ್ದರು.

ಚಿತ್ರೀಕರಣದ ವೇಳೆ ಬಜೆಟ್ ಮೀರಿತ್ತು

ಅಜಯ್ ಬಹ್ಲ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಏಪ್ರಿಲ್ 2022 ರಲ್ಲಿ ಪ್ರಾರಂಭವಾಯಿತು. 45 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಜೆಟ್ ಅನ್ನು ಮೀರಿದೆ. ಈ ಪರಿಸ್ಥಿತಿಯಲ್ಲಿ ಮತ್ತೆ ಶೂಟಿಂಗ್ ಅನ್ನು ತಡೆಹಿಡಿಯಲಾಯಿತು. ನಿರ್ಮಾಪಕ ಶೈಲೇಶ್ ಆರ್. ಸಿಂಗ್ ಅದರ ಮರು ಶೂಟ್ ಅನ್ನು ರದ್ದುಗೊಳಿಸಿದರು. ತಯಾರಕರು ಅದರ ಟ್ರೇಲರ್ ಅನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಿದರು ಮತ್ತು ನವೆಂಬರ್ 3 ರಂದು ದೇಶಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಅಪೂರ್ಣವಾಗಿ ಬಿಡುಗಡೆ ಮಾಡಲಾಯಿತು. ಅದೂ ಯಾವುದೇ ಪ್ರಚಾರವಿಲ್ಲದೆ.

ಚಿತ್ರದ ಡಿಜಿಟಲ್ ಹಕ್ಕುಗಳು ಮಾರಾಟವಾಗಿದ್ದ ಕಾರಣ ಚಿತ್ರವನ್ನು ತರಾತುರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ಈ ಪರಿಸ್ಥಿತಿಯಲ್ಲಿ ಒಟಿಟಿ ಬಿಡುಗಡೆಯು ನಿರ್ಮಾಪಕರಿಗೆ ಮುಖ್ಯವಾಗಿದೆ. ಯಾಕೆಂದರೆ ಅದರ ಗಡುವು ಡಿಸೆಂಬರ್ ಅಂತ್ಯದವರೆಗೆ ಮಾತ್ರ ನೀಡಲಾಗಿತ್ತು.