ಹಿಂದೆ ನಡೆದ ಎಲ್ಲ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಾಕಷ್ಟು ಭಿನ್ನವಾಗಿದೆ. ಹಿಂದಿನ ಸೀಸನ್ಗಳಲ್ಲಿ ಮುದ್ದಾದ ಮಾತು, ಹಾಡು, ಕಾಮಿಡಿ ಜೊತೆಗೆ ಸಣ್ಣ ಜಗಳ ಹೈಲೇಟ್ ಆಗಿತ್ತು. ಆದರೆ, ಈ ಬಾರಿಯ ಸೀಸನ್ನಲ್ಲಿ ಅತಿ ಹೆಚ್ಚು ಜಗಳಗಳೇ ನಡೆಯುತ್ತಿದೆ. ಶೋ ಆರಂಭವಾಗಿ ನಾಲ್ಕು ವಾರ ಆಗಿದೆಯಷ್ಟೆ, ಅದಾಗಲೇ ಇಬ್ಬರು ಸರ್ಧಿಗಳು ಇದೇ ವಿಚಾರಕ್ಕೆ ಮನೆಯಿಂದ ಹೊರಹೋಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಂತು ಸೀಸನ್ 11ರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಸ್ಪರ್ಧಿಗಳು ಮನುಷ್ಯತ್ವ ಬಿಟ್ಟು ಆಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತಹ ಘಟನೆ ದೊಡ್ಮನೆಯಲ್ಲಿ ನಡೆಯುತ್ತಲೇ ಇದೆ. ಟಾಸ್ಕ್ ಆಡುವ ಮಧ್ಯೆ ಕಿತ್ತಾಟಗಳು ಜೋರಾಗಿವೆ. ಬಿಗ್ ಬಾಸ್ ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಮಧ್ಯೆ ಮಂಜು-ತ್ರಿವಿಕ್ರಮ್ ನಡುವೆ ದೊಡ್ಡ ಮಟ್ಟದ ಜಗಳ ನಡೆದಿದೆ.
ಪೋಸ್ಟರ್ ರಕ್ಷಿಸುವ ಟಾಸ್ಕ್ನಲ್ಲಿ ತ್ರಿವಿಕ್ರಮ್ ಅವರು ಉಗ್ರಂ ಮಂಜು ಅವರನ್ನು ಎತ್ತಿ ಬಿಸಾಕಿದಂತೆ ಕಂಡಿದೆ. ಈ ಗಲಾಟೆಯಲ್ಲಿ ಮಂಜು ಅವರ ಬಾಯಿಗೆ ಪೆಟ್ಟಾಗಿ ರಕ್ತ ಚಿಮ್ಮಿದೆ. ಇದನ್ನೆಲ್ಲ ಗಮನಿಸಿ ಟಾಸ್ಕ್‌ವನ್ನು ಅರ್ಧಕ್ಕೆ ನಿಲ್ಲಿಸಿ ಎಂದು ಬಿಗ್ಬಾಸ್ ಆದೇಶಿಸಿದ್ದಾರೆ. ಕ್ಯಾಪ್ಟನ್ ಐಶ್ವರ್ಯಾ, ತ್ರಿವಿಕ್ರಮ್ ಬಳಿ ಹೋಗಿ ಹಾಗೇ ಎತ್ತಿ ಬಿಸಾಡಬಾರದಿತ್ತು. ಇದು ಕುಸ್ತಿ ಆಟ ಅಲ್ಲ ಎಂದು ಹೇಳಿದ್ದಾರೆ. ಆದರೆ ತ್ರಿವಿಕ್ರಮ್ ಮಾತ್ರ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ತ್ರಿವಿಕ್ರಮ್ ಆಡಿದ ಬಗೆ ನೋಡಿ ಉಗ್ರಂ ಮಂಜು ಅವರು ಮೋಕ್ಷಿತಾ, ಗೌತಮಿ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ನಾವು ಆರ್ಟಿಸ್ಟ್ ಮುಖಕ್ಕೆ ಸ್ವಲ್ಪ ಗಾಯವಾದರೂ ಇಡೀ ಜೀವನ ಹಾಳಾಗುತ್ತದೆ ಎಂದು ಮಂಜು ಹೇಳಿದ್ದಾರೆ.
ಟಾಸ್ಕ್ ಮುಗಿದ ಬಳಿಕ ಬಿಗ್ ಬಾಸ್ ಮಾತನಾಡಿದ್ದು, ‘‘ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು, ಷಡ್ಯಂತ್ರಗಳು ಮತ್ತು ನಿಮ್ಮ ಯುಕ್ತಿಯ ಮೇಲೆಯೇ ಅವಲಂಭಿಸಿರುವ ಆಟ. ನೀವು ಆಟವನ್ನು ಆಡಲು ಹಿಡಿದ ದಾರಿಯೇ ಕೊಂಚ ತಪ್ಪಿದೆ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ. ಆಡುವವರ ಮನದಲ್ಲಿ ಛಲ, ಆಕ್ರೋಶ ಹುಟ್ಟುವುದು ಸಹಜ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ,’’ ಎಂದು ಹೇಳಿದ್ದಾರೆ.
BBK 11: ನನ್ನ ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಮತ್ತೊಮ್ಮೆ ಸದ್ದು ಮಾಡಿದ ಚೈತ್ರಾ ಕುಂದಾಪುರ ಮಾತು