ಮುಂಬೈ: ಬಾಲಿವುಡ್‌ನಲ್ಲಿ ಮತ್ತೊಂದು ಜೋಡಿಯ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಹಿರಿಯ ನಟಿ, ʼರಂಗೀಲಾʼ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್ (Urmila Matondkar) ಅವರು ಪತಿ ಮೊಹ್ಸಿನ್ ಅಕ್ತರ್ ಮಿರ್ (Mohsin Akhtar Mir) ಅವರೊಂದಿಗಿನ 8 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ನಿರ್ಧರಿದ್ದಾರೆ ಎನ್ನಲಾಗಿದೆ. ಈಗಾಗಲೇ ವಿಚ್ಛೇದನ ಕೋರಿ ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಾಗ್ಯೂ ವಿಚ್ಛೇದನ ಸುದ್ದಿಯನ್ನು ಊರ್ಮಿಳಾ ಇದುವರೆಗೆ ಅಧಿಕೃತವಾಗಿ ತಿಳಿಸಿಲ್ಲ.
8 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಮೂಲದ ಉದ್ಯಮಿ ಮತ್ತು ಮಾಡೆಲ್ ಮೊಹ್ಸಿನ್ ಅಕ್ತರ್ ಮಿರ್ ಅವರನ್ನು ವಿವಾಹವಾದ ಊರ್ಮಿಳಾ ಯಾವ ಕಾರಣಕ್ಕೆ ಬೇರೆಯಾಗುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಆದರೆ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗುತ್ತಿಲ್ಲ, ಊರ್ಮಿಳಾ ಅವರೇ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಊರ್ಮಿಳಾ ಅವರು ತಮಗಿಂತ 10 ವರ್ಷ ಚಿಕ್ಕವರಾದ ಮೊಹ್ಸಿನ್ ಅಕ್ತರ್ ಮಿರ್ ಅವರನ್ನು 2016ರ ಫೆಬ್ರವರಿ 4ರಂದು ಸರಳವಾಗಿ ಮದುವೆಯಾಗಿದ್ದರು. ತಮ್ಮ 42ನೇ ವಯಸ್ಸಿನಲ್ಲಿ, ತಮಗಿಂತ ಕಿರಿಯನನ್ನು ವರಿಸಿದ ಕಾರಣಕ್ಕೆ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. 2014ರಲ್ಲಿ ನಡೆದ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಅವರ ಸೊಸೆಯ ಮದುವೆ ಸಮಾರಂಭವೊಂದರಲ್ಲಿ ಪರಿಚಿತರಾದ ಊರ್ಮಿಳಾ ಮತ್ತು ಮೊಹ್ಸಿನ್ ಬಳಿಕ ಆತ್ಮೀಯರಾಗಿದ್ದರು. ಅದಾಗಿ 2 ವರ್ಷಗಳ ಬಳಿಕ ಆಪ್ತರ ಸಮ್ಮುಖದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಅಮೃತಸರ್ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದ ಈ ಜೋಡಿ ನಂತರ ಮುಸ್ಲಿಂ ಧರ್ಮ ಪ್ರಕಾರವೂ ಮದುವೆ ಶಾಸ್ತ್ರ ನೆರವೇರಿಸಿತ್ತು.
1974ರಲ್ಲಿ ಜನಿಸಿದ ಊರ್ಮಿಳಾ ಒಂದು ಕಾಲದಲ್ಲಿ ಚಿತ್ರರಂಗದ ಜನಪ್ರಿಯ ತಾರೆಯಾಗಿ ಮೆರೆದಿದ್ದಾರೆ. ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1977ರಲ್ಲಿ ಬಿಡುಗಡೆಯಾದ ‘ಕರ್ಮ’ ಹಿಂದಿ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 3 ವರ್ಷ. ಬಳಿಕ ಅನೇಕ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಅವರು 1989ರಲ್ಲಿ ತೆರೆಕಂಡ ʼಚಾಣಕ್ಯನ್ʼ ಮಲಯಾಳಂ ಸಿನಿಮಾ ಮೂಲಕ ನಾಯಕಿಯಾದರು.
ನಂತರ ಒಂದರ ಮೇಲೊಂದು ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ 1995ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ ‘ರಂಗೀಲಾ’ದಲ್ಲಿ ನಟಿಸುವ ಮೂಲಕ ಊರ್ಮಿಳಾ ಇಡೀ ದೇಶದ ಗಮನ ಸೆಳೆದರು. ಈ ಚಿತ್ರದಲ್ಲಿನ ಅವರ ನಟನೆ, ನೃತ್ಯವನ್ನು ಈಗಲೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 2018ರಲ್ಲಿ ಬಿಡುಗಡೆಗೊಂಡ ಹಿಂದಿಯ ʼಬ್ಯ್ಲಾಕ್‌ಮೇಲ್ʼ ಚಿತ್ರದ ಬಳಿಕ ಅವರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿಲ್ಲ. ಆದರೆ ಕಿರುತೆರಯಲ್ಲಿ ಸಕ್ರೀಯರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Stree 2 Box Office Collection: ಬಾಲಿವುಡ್‌ನಲ್ಲಿ ದಾಖಲೆ ಬರೆದ ʼಸ್ತ್ರೀ 2ʼ; 600 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಚಿತ್ರ
ರಾಜಕೀಯ ಪ್ರವೇಶ
ಚಿತ್ರರಂಗದಿಂದ ರಾಜಕೀಯಕ್ಕೆ ಧುಮುಕಿದ ಊರ್ಮಿಳಾ 2019ರಲ್ಲಿ ಕಾಂಗ್ರೆಸ್‌ಗೆ ಸೇಪರ್ಡೆಯಾದರು. ಅದೇ ವರ್ಷ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 2020ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಸೇರಿದರು. ಒಂದೆರಡು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಮೊಹ್ಸಿನ್ ಅಕ್ತರ್ ಮಿರ್ ಈಗ ಮಾಡೆಲ್, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.