ಚೆನ್ನೈ: ರಜನಿಕಾಂತ್ (Rajinikanth) ಮತ್ತು ಅಮಿತಾಭ್ ಬಚ್ಚನ್ (Amitabh Bachchan) ಅಭಿನಯದ ಟಿಜೆ ಜ್ಞಾನವೇಲ್ ಅವರ ವೆಟ್ಟೈಯಾನ್ ಫಿಲಂ ಮೊದಲ ದಿನದಲ್ಲಿ (Vettaiyan Box Office) ಭಾರತದಾದ್ಯಂತ 30 ಕೋಟಿ ರೂ. ಗಳಿಕೆಯೊಂದಿಗೆ ಪ್ರಾರಂಭವಾಗಿದೆ. ಅಕ್ಟೋಬರ್ 10ರಂದು ಬಿಡುಗಡೆಯಾದ ಬಹು ನಿರೀಕ್ಷಿತ ಚಲನಚಿತ್ರ ಗಳಿಕೆಯಲ್ಲಿ ದಾಪುಗಾಲು ಹಾಕುತ್ತಿದೆ.
ಚಿತ್ರ ಮೊದಲ ದಿನ ತಮಿಳು ವಲಯದಲ್ಲಿ 53.96 ಪ್ರತಿಶತ ಮತ್ತು ತೆಲುಗು ವಲಯದಲ್ಲಿ 34.15 ಪ್ರತಿಶತ ಟಿಕೆಟ್ ಆಕ್ಯುಪೆನ್ಸಿ ದರಗಳನ್ನು ದಾಖಲಿಸಿದೆ. ಆದರೆ ಹಿಂದಿ ಮತ್ತು ಕನ್ನಡ ಕ್ಷೇತ್ರಗಳಲ್ಲಿ ಶೇಕಡವಾರು ಕಡಿಮೆ ಸಂಖ್ಯೆಯಲ್ಲಿವೆ. ಇವು ಕ್ರಮವಾಗಿ 8.11 ಶೇಕಡಾ ಮತ್ತು 10.79 ಶೇಕಡಾ ಇವೆ.
ರಜನಿಕಾಂತ್ ಮತ್ತು ಅಮಿತಾಭ್ ಅವರ ಜೋಡಿ ಹಮ್ (1991) ಚಿತ್ರದಲ್ಲಿ ಒಂದಾದ 33 ವರ್ಷಗಳ ನಂತರ ಮತ್ತೆ ಈ ಚಿತ್ರದಲ್ಲಿ ಒಂದಾಗುತ್ತಿದೆ. ಈ ಜೋಡಿಯನ್ನು ವೀಕ್ಷಿಸಲು ಅಭಿಮಾನಿಗಳು ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಆರಂಭಿಕ ಗಲ್ಲಾಪೆಟ್ಟಿಗೆಯ ಗಳಿಕೆ ಸಾಕಷ್ಟು ಭರವಸೆದಾಯಕವಾಗಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿವೆ. ಕೆಲವರು ರೋಮಾಂಚನಗೊಂಡರೆ, ಹಲವರು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
“ತಲೈವರ್ ಚಿತ್ರದ ದಾರಿಯನ್ನು ಮುನ್ನಡೆಸುತ್ತಾನೆ ಮತ್ತು ಚಲನಚಿತ್ರವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಒಯ್ಯುತ್ತಾನೆ. ಆದರೆ ಒಬ್ಬಂಟಿಯಾಗಿ ಅಲ್ಲ. ಚಿತ್ರಕಥೆಯು ಬಿಗಿಯಾಗಿದೆ. ಪ್ರಮುಖ ಸಾಮಾಜಿಕ ಸಮಸ್ಯೆಯನ್ನು ಕೇಂದ್ರೀಕರಿಸಿದೆ.”
ವೇಟ್ಟೈಯಾನ್ ಕಥೆ ಸರ್ಕಾರಿ ಶಾಲೆಯ ಶಿಕ್ಷಕಿ ಶರಣ್ಯ (ತುಷಾರ ವಿಜಯನ್) ಸುತ್ತ ಸುತ್ತುತ್ತದೆ. ಆಕೆ ಶಾಲೆಯ ಬಳಿ ಮಾದಕವಸ್ತು ವ್ಯಾಪಾರವನ್ನು ಬಹಿರಂಗಪಡಿಸುತ್ತಾರೆ. ಕನ್ಯಾಕುಮಾರಿ ಎಸ್ಪಿ ಅಥಿಯಾನ್ (ರಜನಿಕಾಂತ್) ಪ್ರಕರಣವನ್ನು ಕೈಗೆತ್ತಿಕೊಂಡು ತನ್ನ ‘ಎನ್ಕೌಂಟರ್’ ಶೈಲಿಯಿಂದ ನ್ಯಾಯವನ್ನು ಒದಗಿಸುತ್ತಾನೆ. ಇದರಲ್ಲಿ ಸಾಮಾಜಿಕ, ವೈಯಕ್ತಿಕ ಸಂಗತಿಗಳು ಆಳವಾಗಿ ಹೆಣೆದುಕೊಂಡಿವೆ.
ಈ ಚಿತ್ರದ ಮೂಲಕ ತಮಿಳಿನಲ್ಲಿ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮಂಜು ವಾರಿಯರ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್ ಮುಂತಾದ ಪ್ರತಿಭಾವಂತ ತಾರಾಗಡಣವಿದೆ. ಪೊಲೀಸ್ ಕಾರ್ಯವಿಧಾನದ ಅಂಶಗಳು ಮತ್ತು ಕೆಲವೆಡೆ ಬಿಗಿಯಾದ ಬರವಣಿಗೆ ಪ್ರಶಂಸೆ ಪಡೆದಿದೆ. ಕೆಲವು ನ್ಯೂನತೆಗಳು ಇವೆ. ಕಥಾಹಂದರದ ತೀವ್ರತೆಯನ್ನು ರಜನಿಕಾಂತ್ ಅವರ ಉಪಸ್ಥಿತಿಗೆ ನೀಡಲಾದ ಹೆಚ್ಚಿನ ಆದ್ಯತೆಯು ದುರ್ಬಲಗೊಳಿಸಿದೆ. ಫಹಾದ್ ಫಾಸಿಲ್ನ ಪಾತ್ರವಾದ ಬ್ಯಾಟರಿ, ರಿಫ್ರೆಶ್ ಕಾಮಿಕ್ ಅಂಶವನ್ನು ತಂದಿದೆ. ಅಮಿತಾಭ್ ಪಾತ್ರ ಪ್ರಭಾವಶಾಲಿಯಾಗಿದ್ದರೂ ಕಡಿಮೆ ಬಳಕೆಯಾಗಿದೆ.
ಸದ್ಯಕ್ಕೆ ವೆಟ್ಟೈಯಾನ್ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಮುಂದಿನ ದಿನಗಳಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: Vettaiyan Movie Release: ವೆಟ್ಟೈಯಾನ್ ಸಿನಿಮಾದ ಫಸ್ಟ್ ಶೋ ಕೂಡ ಹೌಸ್ ಫುಲ್ ಆಗಿಲ್ಲ: ಏನಾಯಿತು ರಜನಿ ಚಿತ್ರಕ್ಕೆ?