ಚೆನ್ನೈ: ಬಹು ನಿರೀಕ್ಷಿತ ಕಾಲಿವುಡ್‌ನ ʼವೆಟ್ಟೈಯಾನ್ʼ (Vettaiyan) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿದೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್ (Rajinikanth) ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಬರೋಬ್ಬರಿ 33 ವರ್ಷಗಳ ಬಳಿಕ ತೆರೆ ಮೇಲೆ ಒಂದಾದ ಈ ಚಿತ್ರವನ್ನು ಪ್ರೇಕ್ಷಕರು ಎರಡೂ ಕೈಚಾಚಿ ಸ್ವಾಗತಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಮೂಲಕ 2024ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ತಮಿಳು ಚಿತ್ರ ಎನಿಸಿಕೊಂಡಿದೆ. ದಳಪತಿ ವಿಜಯ್ ಅಭಿನಯದ ʼಗೋಟ್ʼ (The Greatest Of All Time) ಮೊದಲ ಸ್ಥಾನದಲ್ಲಿದೆ. ಹಾಗಾದರೆ ಈ ಚಿತ್ರ 4 ದಿನಗಳಲ್ಲಿ ʼವೆಟ್ಟೈಯಾನ್ʼ ಬಾಕ್ಸ್ ಆಫೀಸ್ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.
ಸೆಟ್ಟೇರಿದಾಗಿನಿಂದಲೇ ಕುತೂಹಲ ಕೆರಳಿಸಿದ ಈ ಚಿತ್ರಕ್ಕೆ ʼಜೈ ಭೀಮ್ʼನಂತಹ ಸೂಕ್ಷ್ಮ ಸಂವೇದಿಯ ಚಿತ್ರ ನಿರ್ದೇಶಿಸಿದ್ದ ಟಿ.ಜಿ.ಜ್ಞಾನವೇಲ್ (TG Gnanavel) ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 10ರಂದು ತಮಿಳು ಜತೆಗೆ ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂಗಳಲ್ಲಿ ತೆರೆಕಂಡ ಈ ಚಿತ್ರದ ಒಟ್ಟಾರೆ ಗಳಿಕೆ ಸುಮಾರು 200 ಕೋಟಿ ರೂ.
At the end of 4-days 1st weekend, #Vettaiyan has crossed the ₹ 200 Crs Gross Milestone at the WW Box office.. 🔥
— Ramesh Bala (@rameshlaus) October 14, 2024
With a non-commercial director like @tjgnan , only #Thalaivar can do this huge numbers.. pic.twitter.com/u1lJ2fiN8a
ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಇನ್ನು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿಯೂ ʼವೆಟ್ಟೈಯಾನ್ʼ ಅಬ್ಬರಿಸುತ್ತಿದೆ. 4ನೇ ದಿನ 100 ಕೋಟಿ ರೂ. ಮೈಲಿಗಲ್ಲನ್ನು ದಾಟಿ ಮುಂದುವರಿದಿದೆ. ಭಾರತದಲ್ಲಿ ರಜನಿಕಾಂತ್ ಅಭಿನಯದ ಈ ಚಿತ್ರ ಗಳಿಸಿದ್ದು ಸುಮಾರು 125.08 ಕೋಟಿ ರೂ. ಈ ಪೈಕಿ ಮೊದಲ ದಿನ (ಅಕ್ಟೋಬರ್ 10) 32 ಕೋಟಿ ರೂ. ಗಳಿಸಿದರೆ, ಎರಡನೇ ದಿನದ ಕಲೆಕ್ಷನ್ 24 ಕೋಟಿ ರೂ. ಇನ್ನು ಮೂರನೇ ದಿನ 27 ಕೋಟಿ ರೂ. ಹರಿದು ಬಂದಿದೆ. ನಾಲ್ಕನೇ ದಿನವಾದ ಭಾನುವಾರ ಗಳಿಸಿದ್ದು 23 ಕೋಟಿ ರೂ.
ʼಇಂಡಿಯನ್ 2ʼ ಗಳಿಕೆ ಮೀರಿದ ʼವೆಟ್ಟೈಯಾನ್ʼ
ವಿಶೇಷ ಎಂದರೆ ಇತ್ತೀಚೆಗೆ ರಿಲೀಸ್ ಆದ ಕಮಲ್ ಹಾಸನ್ ಅವರ ʼಇಂಡಿಯನ್ 2ʼ ಚಿತ್ರದ ಗಳಿಕೆಯನ್ನು ಕೇವಲ ನಾಲ್ಕೇ ದಿನಕ್ಕೆ ʼವೆಟ್ಟೈಯಾನ್ʼ ಮೀರಿಸಿದೆ. ಕಮಲ್ ಹಾಸನ್ ಚಿತ್ರ ʼಇಂಡಿಯನ್ 2ʼ ಗಳಿಸಿದ್ದು 150 ಕೋಟಿ ರೂ. ಇನ್ನು ವಿಜಯ್ ಅಭಿನಯದ ʼಗೋಟ್ʼ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 464.51 ಕೋಟಿ ರೂ. ಗಳಿಸಿ ಮೊದಲ ಸ್ಥಾನದಲ್ಲಿದೆ.
ಎನ್‌ಕೌಂಟರ್ ಸರಿಯೇ ತಪ್ಪೇ ಎನ್ನುವ ಬಹು ಚರ್ಚಿತ ವಿಷಯದ ಸುತ್ತ ಈ ಚಿತ್ರದ ಕಥೆ ಸಾಗುತ್ತಿದೆ. ಪೊಲೀಸ್ ಅಧಿಕಾರಿಯಾಗಿ ರಜನಿಕಾಂತ್ ಮತ್ತು ಜಸ್ಟಿಸ್ ಆಗಿ ಅಮಿತಾಭ್ ಬಚ್ಚನ್ ತೆರೆ ಮೇಲೆ ಅಬ್ಬರಿಸಿದ್ದಾರೆ. 3 ದಶಕಗಳ ಬಳಿಕ ಇವರು ತೆರೆ ಮೇಲೆ ಒಂದಾಗಿ ಮೋಡಿ ಮಾಡಿದ್ದಾರೆ. ಇವರ ಜತೆಗೆ ಮಲಯಾಳಂ ನಟ ಫಹದ್ ಫಾಸಿಲ್ ಪಾತ್ರ ಕೂಡ ಗಮನ ಸೆಳೆದಿದೆ. ಮಂಜು ವಾರಿಯರ್ ಮೊದಲ ಬಾರಿಗೆ ರಜನಿಕಾಂತ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಶಾರ ವಿಜಯನ್, ಕಿಶೋರ್ ಕುಮಾರ್, ಅಭಿರಾಮಿ, ರೋಹಿಣಿ, ಜಿ.ಎಂ.ಸುಂದರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Vettaiyan On OTT: ದಾಖಲೆ ಮೊತ್ತಕ್ಕೆ ʼವೆಟ್ಟೈಯಾನ್ʼ ಹಕ್ಕು ಖರೀದಿಸಿದ ಪ್ರೈಂ ವಿಡಿಯೊ; ರಜನಿಕಾಂತ್ ಚಿತ್ರ ಸ್ಟ್ರೀಮಿಂಗ್ ಯಾವಾಗ?