ಚೆನ್ನೈ: ಬಹು ನಿರೀಕ್ಷಿತ ʼವೆಟ್ಟೈಯಾನ್ʼ (Vettaiyan) ತಮಿಳಿನ ಪ್ಯಾನ್ ಇಂಡಿಯಾ ಚಿತ್ರ ತೆರೆಕಂಡಿದೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ರಜನಿಕಾಂತ್ (Rajinikanth) ಮತ್ತು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಬರೋಬ್ಬರಿ 33 ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವುದು, ಬಹು ತಾರಾಗಣ, ʼಜೈಭೀಮ್ʼನಂತಹ ಸೂಕ್ಷ್ಮ ಸಂವೇದಿಯ ಚಿತ್ರ ನೀಡಿದ್ದ ಟಿ.ಜಿ.ಜ್ಞಾನವೇಲ್ (TG Gnanavel) ನಿರ್ದೇಶನ, ಅನಿರುದ್ಧ ರವಿಚಂದರ್ ಸಂಗೀತ- ಈ ಎಲ್ಲ ಕಾರಣಗಳಿಗೆ ʼವೆಟ್ಟೈಯಾನ್ʼ ಬಿಡುಗಡೆಗೆ ಮುನ್ನವೇ ನಿರೀಕ್ಷೆ ಮೂಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ, ವಿಮರ್ಶಕರಿಂದ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.
ದಸರಾ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಚಿತ್ರ ಗುರುವಾರ (ಅಕ್ಟೋಬರ್ 10) ತೆರೆಕಂಡಿದೆ. ತಮಿಳಿನ ಜತೆಗೆ ಕನ್ನಡ, ತೆಲುಗು, ಮಲಯಾಳಂ, ಮತ್ತು ಹಿಂದಿ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ʼವೆಟ್ಟೈಯಾನ್ʼ ಗುರುವಾರ ಗಳಿಸಿದ್ದು ಸುಮಾರು 31 ಕೋಟಿ ರೂ.
Thalaivar hunts the box office!🤩 VETTAIYAN 🕶️ is running successfully, smashing records and winning hearts everywhere. 🔥 #VettaiyanRunningSuccessfully 🕶️ in Tamil, Telugu, Hindi & Kannada!@rajinikanth @SrBachchan @tjgnan @anirudhofficial @LycaProductions #Subaskaran… pic.twitter.com/NJpqYc9zB6
— Lyca Productions (@LycaProductions) October 11, 2024
ಇನ್ನು ಚಿತ್ರ ಬಿಡುಗಡೆಯಾದ ಎರಡನೇ ದಿನ ಅಂದರೆ ಶುಕ್ರವಾರದ ಗಳಿಕೆ 24 ಕೋಟಿ ರೂ. ಈ ಪೈಕಿ 21.35 ಕೋಟಿ ರೂ. ತಮಿಳು ಆವೃತ್ತಿಯಿಂದಲೇ ಹರಿದು ಬಂದಿದೆ. ಆ ಮೂಲಕ 2 ದಿನಗಳಲ್ಲಿ ಒಟ್ಟು 55 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ಉತ್ತರ ಅಮೆರಿಕ, ಇಂಗ್ಲೆಂಡ್ ಮತ್ತು ಮಲೇಷ್ಯಾದಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಒಟ್ಟಾರೆ ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್ 70 ಕೋಟಿ ರೂ. ಈ ವೀಕೆಂಡ್ನಲ್ಲಿ ಗಳಿಕೆ 100 ಕೋಟಿ ರೂ. ದಾಟಲಿದೆ ಎನ್ನುವ ಲೆಕ್ಕಾಚಾರವಿದೆ. ಶನಿವಾರ, ಭಾನುವಾರ ರಜಾ ದಿನವಾಗಿರುವುದರಿಂದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. ಕನ್ನಡದ ʼಮಾರ್ಟಿನ್ʼ ಬಿಟ್ಟರೆ ದೊಡ್ಡ ಚಿತ್ರ ಯಾವುದೂ ತೆರೆ ಕಾಣದಿರುವುದು ಅನುಕೂಲವಾಗಲಿದೆ.
ಲೈಕಾ ಪ್ರೊಡಕ್ಷನ್ಸ್ ʼವೆಟ್ಟೈಯಾನ್ʼ ಚಿತ್ರವನ್ನು ಸುಮಾರು 200 ಕೋಟಿ ರೂ. ಬಜೆಟ್ನಲ್ಲಿ ತಯಾರಿಸಿದೆ. ಮಂಜು ವಾರಿಯರ್ ಮೊದಲ ಬಾರಿಗೆ ರಜನಿಕಾಂತ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಶಾರ ವಿಜಯನ್, ಕಿಶೋರ್ ಕುಮಾರ್, ಅಭಿರಾಮಿ, ರೋಹಿಣಿ, ಜಿ.ಎಂ.ಸುಂದರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಎನ್ಕೌಂಟರ್ ಸರಿಯೇ ತಪ್ಪೇ ಎನ್ನುವ ಜಿಜ್ಞಾಸೆಯ ಸುತ್ತ ಈ ಆ್ಯಕ್ಷನ್ ಡ್ರಾಮಾ ಸಿನಿಮಾದ ಕಥೆ ಸಾಗುತ್ತದೆ.
1991ರಲ್ಲಿ ತೆರೆಕಂಡ ʼಹಮ್ʼ ಹಿಂದಿ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಕೊನೆಯ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅದಾಗಿ 3 ದಶಕಗಳ ಬಳಿಕ ಇಬ್ಬರು ತೆರೆ ಹಂಚಿಕೊಂಡಿರುವುದು ವಿಶೇಷ. ಕಳೆದ ವರ್ಷ ತೆರೆಕಂಡ ರಜನಿಕಾಂತ್ ಅಬಿನಯದ ಜೈಲರ್ ಸೂಪರ್ ಹಿಟ್ ಆಗಿತ್ತು. ಇದೀಗ ʼವೆಟ್ಟೈಯಾನ್ʼ ಸರದಿ.
ಈ ಸುದ್ದಿಯನ್ನೂ ಓದಿ: Vettaiyan Movie Review: ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಿದ ರಜನಿಕಾಂತ್; ʼವೆಟ್ಟೈಯಾನ್ʼ ಚಿತ್ರ ಹೇಗಿದೆ?