Sunday, 15th December 2024

 “ವಿಕ್ರಾಂತ್” ನಿಗೂ “ರೋಣ” ಕ್ಕೂ ಇರುವ ಲಿಂಕ್ ಏನ್ ಗೊತ್ತಾ?

//ರೋಣದ ರಹಸ್ಯ ಕಥೆ//
-ಕಿಚ್ಚನ ಸಿನಿಮಾಗಳಲ್ಲಿ ರೋಣ ಇದ್ದರೆ ಗೆದ್ದಂತೆಯೇ
-ಕೆಂಪೇಗೌಡ ಇನ್ಸಪೆಕ್ಟರ್ ಆಗಿದ್ದು, ಪೊಲೀಸ್ ಅಧಿಕಾರಿ ವಿಕ್ರಾಂತ್ 
ಇರೋದು ಗದಗ ಜಿಲ್ಲೆಯ ರೋಣದಲ್ಲಿ!
-ಬಸವರಾಜ‌ ಕರುಗಲ್. 
ವಿಶ್ವವಾಣಿ ಸಿನಿಮಾ ಬ್ಯುರೋ,
“ರೋಣ”- ಈ ಹೆಸರು ಚಿತ್ರರಂಗದವರಿಗೆ ಚಿರಪರಿಚಿತ ಹೆಸರೇನಲ್ಲ. ವಿಕ್ರಾಂತ್ ರೋಣ ಸಿನಿಮಾ ಸೆಟ್ಟೇರಿದಾಗಿನಿಂದ ಎಲ್ಲರೂ ರೋಣದ ಜಪ‌ದಲ್ಲಿದ್ದಾರೆ. ಅದರಲ್ಲೂ ರಾ ರಾ ರಕ್ಕಮ್ಮ ಹಾಡು ಸೂಪರ್ ಹಿಟ್ ಆಗುತ್ತಿದ್ದಂತೆ ಯುಟ್ಯೂಬ್, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ವಿಕ್ರಾಂತ್‌ನ ಜೊತೆ ರೋಣವನ್ನೂ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ!
ಇದು ಉತ್ತರ ಕರ್ನಾಟಕ ಭಾಗದ ಗದಗ ಜಿಲ್ಲೆಯಲ್ಲಿರುವ ಈಗಿನ ತಾಲೂಕೊಂದರ ಹೆಸರೇ ರೋಣ. ಮೊದಲು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿದ್ದ ರೋಣ 1997ರ ಆಗಸ್ಟ್ 24ಕ್ಕೆ ಗದಗ ಜಿಲ್ಲೆಯ ತಾಲೂಕು ಕೇಂದ್ರವಾಗಿದೆ.
ಸರಿ…ಗದಗ ಜಿಲ್ಲೆಯ ರೋಣಕ್ಕೂ ವಿಕ್ರಾಂತ್ ರೋಣನಿಗೂ ಏನು ಲಿಂಕ್ ಇರಬಹುದು? ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಖಂಡಿತವಾಗಿಯೂ ಗದಗ ಜಿಲ್ಲೆಯ ರೋಣಕ್ಕೂ ವಿಕ್ರಾಂತ್‌ನ ರೋಣಕ್ಕೂ ಲಿಂಕ್ ಇದೆ. ಆ ಲಿಂಕ್ ಗೊತ್ತಾಗಿದ್ದು ವಿಶ್ವವಾಣಿಗೆ ಮಾತ್ರ ಅನ್ನೋದು ವಿಶೇಷ.
ಸಿಂಗಂ ರಿಮೇಕ್ ಆಗಿದ್ದ ಕೆಂಪೇಗೌಡ: ಸುದೀಪ್ 2008-09ರಲ್ಲಿ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ನಿರ್ದೇಶಿವೇ ಕೈ ಸುಟ್ಟು ಕೊಂಡಿದ್ದರು. 2012-13ರಲ್ಲಿ ಸುದೀಪ್ ಮತ್ತೇ ನಿರ್ದೇಶಕನ ಕ್ಯಾಪ್ ಹಾಕಿದ್ದು ಕಾಲಿವುಡ್‌ನ ಸಿಂಗಂ ಸಿನಿಮಾದ ಕನ್ನಡ ಅವ ತರಣಿಕೆ ಕೆಂಪೇಗೌಡ ಮೂಲಕ. ಕೆಂಪೇಗೌಡ ಸಿನಿಮಾದಲ್ಲಿ ನಿರ್ದೇಶಕ ಕಮ್ ನಾಯಕನಾಗಿ ಕಿಚ್ಚ ಸುದೀಪ್ ಗೆದ್ದರು.
ಕೆಂಪೇಗೌಡ ಸಿನಿಮಾ ಬರೀ ಸುದೀಪ್‌ ಕೆರಿಯರ್‌ನಲ್ಲಷ್ಟೇ ಮಹತ್ವದ ಪಾತ್ರ ವಹಿಸಲಿಲ್ಲ. ಡಬ್ಬಿಂಗ್ ಕಲಾವಿದನಾಗಿದ್ದ ರವಿ ಶಂಕರ್‌ಗೆ ಖಳನ ಖದರ್ ತಂದುಕೊಟ್ಟ ಸಿನಿಮಾ. ಇವತ್ತಿಗೂ ರವಿಶಂಕರ್‌ಗೆ ಸಾರ್ವಜನಿಕ ವೇದಿಕೆಗಳಲ್ಲಿ ಕೆಂಪೇಗೌಡ ಸಿನಿಮಾದ ಡೈಲಾಗ್‌ಗೆ ಜನರಿಂದ ಬೇಡಿಕೆ. ಕೆಂಪೇಗೌಡ ಸಿನಿಮಾದಲ್ಲಿ ಕಿಚ್ಚ ಪೊಲೀಸ್ ಅಧಿಕಾರಿಯಾಗಿದ್ದು ಇದೇ ಗದಗ ಜಿಲ್ಲೆಯ ರೋಣದಲ್ಲಿ!
ಎರಡನೇ ಸಲ ಕಿಚ್ಚ ಸುದೀಪ್ ಸಿನಿಮಾದಲ್ಲಿ ಗದಗ ಜಿಲ್ಲೆಯ ರೋಣ ರಾರಾಜಿಸುತ್ತಿದೆ. ಬುರ್ಜ್ ಖಲೀಫಾದಲ್ಲಿ ಟೈಟಲ್ ಲಾಂಚ್‌ ನಿಂದ ಸದ್ಯ ರಾ.. ರಾ.. ರಕ್ಕಮ್ಮ ಹಾಡಿನವರೆಗೂ ಸರ್ಚ್ ಎಂಜಿನ್‌ನಲ್ಲಿ ರೋಣದ ತಡಕಾಟ ಜೋರಾಗಿದೆ.
ವಿಕ್ರಾಂತ್ ಸಿನಿಮಾ ಕಥೆ ಆರಂಭವೂ ರೋಣದಿಂದ!!: ವಿಕ್ರಾಂತ್ ಸಿನಿಮಾದ ಟ್ರೈಲರ್ ನೋಡಿದ ಮೇಲೆ ಸಿನಿಮಾದಲ್ಲಿ ಕಿಚ್ಚ ಪೊಲೀಸ್ ಅಧಿಕಾರಿ ಪಾತ್ರದ ಜೊತೆ ಬೇರೆ ಆಯಾಮ ಗಳ ಪಾತ್ರಗಳಲ್ಲೂ ಕಾಣಿಸಿಕೊಂಡಿರುವುದು ಸ್ಪಷ್ಟ. ವಿಭಿನ್ನ ಲೋಕ ಸೃಷ್ಟಿಯ ಫ್ಯಾಂಟಸಿ ಕಮ್ ಹಾರರ್ ಫೀಲ್ ಇರುವ ಘಾಟು ಟ್ರೈಲರ್‌ಗಳಿಂದ ಗೊತ್ತಾಗಿದೆ.
ವಿಶೇಷ ಅಂದ್ರೆ ವಿಕ್ರಾಂತ್‌ನ ಕಥೆ ಆರಂಭ ಆಗೋದು ಗದಗ ಜಿಲ್ಲೆಯ ‌ರೋಣದಿಂದ. ಹಾಗಾಗಿ ಚಿತ್ರಕ್ಕೆ ವಿಕ್ರಾಂತ್ ಜೊತೆ ರೋಣ ಎಂಬ ಹೆಸರೂ ಸಹ ಅನಿವಾರ್ಯವಾಯಿತು ಎಂಬ ಮಾಹಿತಿ ಚಿತ್ರತಂಡದಿಂದ ವಿಶ್ವವಾಣಿಗೆ ಲಭ್ಯವಾಗಿದೆ.