Thursday, 12th December 2024

Sandalwood News: ವಜ್ರಮುನಿ ಲುಕ್‌ನಲ್ಲಿ ಕೋಮಲ್; ‘ಯಲಾಕುನ್ನಿ’ ಚಿತ್ರೀಕರಣ ಪೂರ್ಣ

Sandalwood News

ಬೆಂಗಳೂರು: ‘ಯಲಾಕುನ್ನಿ’ ಈ ಡೈಲಾಗ್ ಅನ್ನು ಕನ್ನಡ ಚಿತ್ರಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಖಳನಟರ ದಿವಂಗತ ವಜ್ರಮುನಿ ಅವರ ಜನಪ್ರಿಯ ಡೈಲಾಗ್ ಇದು. ಈ ಡೈಲಾಗ್ ಅನ್ನೇ ಸಿನಿಮಾ ಶೀರ್ಷಿಕೆಯಾಗಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಮುಹೂರ್ತ ಮಾಡಿ ಸದ್ದು ಮಾಡಿತ್ತು ‘ಯಲಾಕುನ್ನಿ’ ಚಿತ್ರತಂಡ. ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿರುವ ಹಾಗೂ ಕೋಮಲ್ ಕುಮಾರ್ (Komal) ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಹೊಸ ಪ್ರತಿಭೆ ಎನ್‌.ಆರ್‌. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ (Sandalwood News).

ಸದ್ಯ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿರುವ ʼಯಲಾಕುನ್ನಿʼ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಿರುಸಿನಿಂದ ಸಾಗಿದೆ‌. ಸದ್ಯದಲ್ಲೇ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡಲು ಚಿತ್ರಮಂದಿರಗಳಿಗೆ ʼಯಲಾಕುನ್ನಿʼ ಲಗ್ಗೆ ಇಡಲಿದೆ.  ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗಿತ್ತು.

ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ‌. ಕೋಮಲ್ ಅವರ ಜೊತೆಗೆ ದೊಡ್ಡ ದೊಡ್ಡ ಕಲಾವಿದರ ದಂಡೆ ಈ ಚಿತ್ರದಲ್ಲಿದೆ. ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ.ಆರ್. ಪೇಟೆ, ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರಕರ್, ಮಾನಸಿ ಸುಧೀರ್(ʼಕಾಂತಾರʼ ಖ್ಯಾತಿ), ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ, ಮಹಾಂತೇಶ್, ಬೌಬೌ ಜಯರಾಮ್, ನಿರ್ದೇಶಕ ಸಹನ ಮೂರ್ತಿ, ಭಜರಂಗಿ ಪ್ರಸನ್ನ, ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ಮಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ.

Sandalwood News

ವಿಶೇಷ ವಾಗಿ ವಜ್ರಮುನಿ ಅವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ. ಮಯೂರ್ ಪಟೇಲ್ ಅವರು ಖಳ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ ‘ಯಲಾಕುನ್ನಿ’ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. .ಯಲಾಕುನ್ನಿʼ  ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ. ಹಾಸ್ಯ ಕಲಾವಿದರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿರುವ ಕೋಮಲ್‌ ಸದ್ಯ ನಾಯಕರಾಗಿ ನಟಿಸುತ್ತಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಕೋಮಲ್‌ 2012ರಲ್ಲೆ ತೆರೆಕಂಡ ʼಗೋವಿಂದಾಯ ನಮಃʼ ಚಿತ್ರದ ಮೂಲಕ ಜನಪ್ರಿಯರಾಗಿದ್ದಾರೆ.