ಬೆಂಗಳೂರು: ನವರಸ ನಾಯಕ, ನಟ ಜಗ್ಗೇಶ್ ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ತಮಗಾದ ಅವಮಾನ, ಕನ್ನಡ ಚಿತ್ರರಂಗದ ದುಃಸ್ಥಿತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನೋವು ಹೊರಹಾಕಿದ್ದಾರೆ.
ಆಡಿಯೋ ಪ್ರಕರಣ ನನಗೆ ತುಂಬಾ ನೋವು ತಂದಿದೆ. ನನ್ನ 40 ವರ್ಷಗಳ ಸಿನಿ ಜರ್ನಿಯನ್ನು ನೀವು ಅವಮಾನ ಮಾಡಿದ್ದೀರಿ. ನಾನು 40 ವರ್ಷಗಳ ಕಾಲ ಊಟ, ನಿದ್ದೆ ಇಲ್ಲದೇ ಬೆಳೆದವನು, ಚಾಪೆ ಹಾಸಿಕೊಂಡು ಚಿತ್ರರಂಗದಲ್ಲಿ ಬೆಳೆದವನು ಹೊರತು ಯಾರದೋ ತಲೆ ಹಿಡಿದು ಬೆಳೆದವನಲ್ಲ.
ಇಂದು ಕನ್ನಡ ಚಿತ್ರರಂಗ ಹಾಳಾಗುತ್ತಿದೆ. ಥಿಯೇಟರ್ ಮುಂದೆ ನೂರು ಜನರು ನಿಂತರೆ ಅದಲ್ಲ ಜೀವನ…ಒಬ್ಬೊಬ್ಬ ಪ್ರೊಡ್ಯುಸರ್ ಬೀದಿಗೆ ಬರುತ್ತಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ದೊಡ್ದ ದೊಡ್ಡ ಮಹಾನ್ ನಟರು ಕಟ್ಟಿದ ಕನ್ನಡ ಇಂಡಸ್ಟ್ರಿ ಹಾಳಾಗಿ ಹೋಗಬೇಕಾ.? ಡಾ.ರಾಜ್ ಕುಮಾರ್, ವಿಷ್ಟುವರ್ಧನ್, ಅಂಬರೀಷ್ ಹೋದರು. ಅವರೆಲ್ಲ ಸತ್ತ ಮಾರನೇ ದಿನವೇ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ…ನಾನೊಬ್ಬ, ರವಿಚಂದ್ರನ್ ಒಬ್ಬ, ಶಿವರಾಜ್ ಕುಮಾರ್ ಒಬ್ಬ, ರಮೇಶ್ ಒಬ್ಬ…ನಾವು ಸತ್ತ ಮೇಲೆ ತಿಥಿ ಮಾಡಿ ಆನಂದಿಸಿ ಎಂದು ಭಾವುಕರಾಗಿದ್ದಾರೆ.
ನನಗೆ ಅವಮಾನ ಮಾಡಬೇಕು ಎಂಬುದು ಉದ್ದೇಶವಾಗಿದ್ದರೆ ಅದು ಸಾಧ್ಯವಿಲ್ಲ. ಪರಿಶುದ್ಧವಾಗಿ ಬದುಕಿದವನು. ತಿನ್ನಲು ಅನ್ನವಿಲ್ಲದೇ ಕಷ್ಟಪಟ್ಟು ಸಿನಿರಂಗದಲ್ಲಿ ಬದುಕಿದವನು ನಾನು. 40 ವರ್ಷದಲ್ಲಿ 150 ಚಿತ್ರ ಮಾಡಿದ್ದೇನೆ. 29 ಚಿತ್ರ ನಿರ್ಮಿಸಿದ್ದೇನೆ. 2 ವರ್ಷ ಶಾಸಕನಾಗಿದ್ದೇನೆ. ಸ್ಟಾರ್ ಗಿರಿ ತೋರಿಸಿ ಬೂಟಾಟಿಕೆ ಮಾಡಬೇಡಿ ಎಂದು ಹೇಳಿದ್ದಾರೆ.