Sunday, 15th December 2024

Money Tips: ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅಂಶ ತಿಳಿದಿರಲಿ

Money Tips

ಬೆಂಗಳೂರು: ಸಂಪತ್ತು ಹೆಚ್ಚಿಸಲು ಮತ್ತು ಆರ್ಥಿಕವಾಗಿ ಸದೃಢರಾಗಲು  ಮ್ಯೂಚುವಲ್‌ ಫಂಡ್‌ (Mutual fund)ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಅದಾಗ್ಯೂ ಎಲ್ಲ ಹೂಡಿಕೆಗಳಂತೆ ಮ್ಯೂಚುವಲ್‌ ಫಂಡ್‌ನಲ್ಲಿಯೂ ಅದರದ್ದೇ ಆದ ಅಪಾಯವಿದೆ. ಈ ಬಗ್ಗೆ ಹೂಡಿಕೆದಾರರು ಗಮನಹರಿಸುವುದು ಮುಖ್ಯ. ಹೀಗಾಗಿಯೇ ಹೂಡಿಕೆ ಮಾಡುವ ಮುನ್ನ  ಈ ಅಪಾಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಇಂದಿನ ಮನಿ ಟಿಪ್ಸ್‌ (Money Tips)ನಲ್ಲಿ ಹೂಡಿಕೆದಾರರಿಗೆ ಎದುರಾಗುವ ಅಂತಹ 5 ಅಪಾಯಗಳ ಮಾಹಿತಿ ನೀಡಲಾಗಿದೆ.

ಮ್ಯೂಚುವಲ್‌ ಫಂಡ್‌ ಎಂದರೇನು?

ಮಾರುಕಟ್ಟೆಯಲ್ಲಿನ ಅಪಾಯ ಅರಿತುಕೊಳ್ಳುವ ಮುನ್ನ ಮ್ಯೂಚುವಲ್‌ ಫಂಡ್‌ ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.  ಮ್ಯೂಚುವಲ್ ಫಂಡ್​ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್​ನ ಹಣ ಹೂಡಿಕೆ ಆಗಿರುತ್ತದೆ. ನೀವು ಮ್ಯೂಚುವಲ್ ಫಂಡ್​ಗೆ ಹಾಕುವ ಹಣವನ್ನು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಲಾಭದ ಉದ್ದೇಶಕ್ಕಾಗಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಾಯಿಸುತ್ತಿರುತ್ತಾರೆ.

ಮಜವಾದ ಉದಾಹರಣೆಯೊಂದಿಗೆ ಇದನ್ನು ಅರ್ಥ ಮಾಡಿಕೊಳ್ಳೋಣ. ಮ್ಯೂಚುವಲ್ ಫಂಡ್‌ಗಳನ್ನು ಗ್ರೂಪ್ ರೋಡ್ ಟ್ರಿಪ್‌ ಎಂದು ಪರಿಗಣಿಸಿ. ನೀವು ಇತರ ಪ್ರಯಾಣಿಕರು (ಹೂಡಿಕೆದಾರರು) ಮತ್ತು ಚಾಲಕ (ಫಂಡ್ ಮ್ಯಾನೇಜರ್)ನೊಂದಿಗೆ ಪ್ರಯಾಣಿಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಗಮ್ಯಸ್ಥಾನಕ್ಕೆ ತೆರಳುವಾಗ ಸುಗಮ ಸಂಚಾರಕ್ಕೆ  ಅಡ್ಡಿಪಡಿಸುವ ಕಳಪೆ ರಸ್ತೆಯನ್ನು ಮಾರುಕಟ್ಟೆ ಏರಿಳಿತಗಳಿಗೆ, ವಾಹನದಲ್ಲಿ ಕಂಡು ಬರುವ ಅನಿರೀಕ್ಷಿತ ಎಂಜಿನ್ ತೊಂದರೆಗಳನ್ನು ಕ್ರೆಡಿಟ್ ಸಮಸ್ಯೆಗಳಿಗೆ ಹೋಲಿಸಬಹುದು. ಹಾಗಾದರೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಸಾಮಾನ್ಯವಾಗಿ ಯಾವೆಲ್ಲ ಅಪಾಯಗಳು ಎದುರಾಗುತ್ತವೆ ಎನ್ನುವ ವಿವರಗಳನ್ನು ಈಗ ನೋಡೋಣ.

ಮಾರುಕಟ್ಟೆಯ ಏರಿಳಿತ

ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತವೆ. ಅಂದರೆ ಫಂಡ್‌ನ ಹೂಡಿಕೆಯ ಮೌಲ್ಯವು ಮಾರುಕಟ್ಟೆಗೆ ಹೊಂದಿಕೊಂಡು ಏರಿಕೆಯಾಗಬಹುದು ಅಥವಾ ಇಳಿಕೆಯಾಗಬಹುದು. ಮಾರುಕಟ್ಟೆ ಕಳಪೆ ಪ್ರದರ್ಶನ ನೀಡಿದರೆ ನಿಮ್ಮ ಮ್ಯೂಚುವಲ್ ಫಂಡ್‌ನ ಮೌಲ್ಯವು ಕಡಿಮೆಯಾಗುತ್ತದೆ. ಇದು ನಷ್ಟಕ್ಕೆ ಕಾರಣವಾಗಲಿದೆ.

ಬಡ್ಡಿ ದರದ ಏರಿಳಿತ

ಇದು ವಿಶೇಷವಾಗಿ ಬಾಂಡ್ ಮ್ಯೂಚುವಲ್ ಫಂಡ್‌ಗಳಿಗೆ ಬಾಧಿಸುತ್ತದೆ. ಬಡ್ಡಿದರಗಳು ಹೆಚ್ಚಾದಾಗ ಅಸ್ತಿತ್ವದಲ್ಲಿರುವ ಬಾಂಡ್‌ಗಳ ಮೌಲ್ಯವು ಸಾಮಾನ್ಯವಾಗಿ ಕುಸಿಯುತ್ತದೆ. ಇದು ಬಾಂಡ್ ಮ್ಯೂಚುವಲ್ ಫಂಡ್‌ಗಳ ನಿವ್ವಳ ಆಸ್ತಿ ಮೌಲ್ಯದ (Net Asset Value-NAV) ಇಳಿಕೆಗೆ ಕಾರಣವಾಗುತ್ತದೆ.

ಕ್ರೆಡಿಟ್ ಅಪಾಯ

ಮ್ಯೂಚುವಲ್ ಫಂಡ್ ಅನ್ನು ಬಾಂಡ್‌ ಅಥವಾ ಇತರ ಡೆಬಿಟ್‌ ಸೆಕ್ಯುರಿಟೀಸ್‌ನಲ್ಲಿ ಹೂಡಿಕೆ ಮಾಡಿದರೆ ಕೆಲವೊಮ್ಮೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಲೋವರ್‌ ರೇಟೆಡ್ ಬಾಂಡ್‌ಗಳಲ್ಲಿ ಈ ಅಪಾಯದ ಸಾಧ್ಯತೆ ಹೆಚ್ಚು.

ಹಣದುಬ್ಬರ

ಹಣದುಬ್ಬರವು ನಿಮ್ಮ ಹೂಡಿಕೆಯ ನಷ್ಟಕ್ಕೆ ಕಾರಣವಾಗಲಿದೆ. ಹಣದುಬ್ಬರದಿಂದ ನಿಮ್ಮ ಖರೀದಿಯ ಶಕ್ತಿ ಕಡಿಮೆಯಾಗಲಿದೆ.  ಮ್ಯೂಚುವಲ್ ಫಂಡ್‌ನ ಆದಾಯವು ಹಣದುಬ್ಬರ ದರಕ್ಕಿಂತ ಕಡಿಮೆಯಿದ್ದರೆ ಹೂಡಿಕೆಯ ನಿಜವಾದ ಮೌಲ್ಯವು ಕುಸಿಯುವ ಅಪಾಯವಿದೆ.

ಲಿಕ್ವಿಡಿಟಿ ರಿಸ್ಕ್‌

ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದರಿಂದ ಸಕಾಲಕ್ಕೆ ಹೂಡಿಕೆ ಹಿಂಪಡೆಯಲು ಸಾಧ್ಯವಾಗುವುದಿಲ್ಲ.  ಒಂದು ಕನಿಷ್ಠ ಅವಧಿಯ ಬಳಿಕ ಹಿಂಪಡೆಯಲು ಸಾಧ್ಯವಾಗುವ ಮ್ಯೂಚುವಲ್‌ ಫಂಡ್‌ ವಿಧವನ್ನು ದ್ರವ್ಯತೆ ಅಥವಾ ಲಿಕ್ವಿಡಿಟಿ ಎಂದು ಕರೆಯಲಾಗುತ್ತದೆ. ಕನಿಷ್ಠ ಅವಧಿ ಮುಗಿದ ಬಳಿಕ ಈ ಫಂಡ್‌ಗಳನ್ನು ಮಾರಾಟ ಮಾಡಬಹುದಾಗಿದೆ.