Friday, 22nd November 2024

LIC: ರೈಲ್ವೆಯ ಐಆರ್‌ಸಿಟಿಸಿಯಲ್ಲಿ ಹೂಡಿಕೆ ಹೆಚ್ಚಿಸಿದ ಎಲ್‌ಐಸಿ

LIC

ಮುಂಬೈ: ಭಾರತೀಯ ಜೀವ ವಿಮಾ ನಿಗಮ (LIC)ವು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (Indian Railway Catering and Tourism Corporation-IRCTC) ತನ್ನ ಹೂಡಿಕೆಯನ್ನು ಶೇಕಡಾ 9.3ಕ್ಕೆ ಹೆಚ್ಚಿಸಿದೆ.

ʼʼಭಾರತೀಯ ಜೀವ ವಿಮಾ ನಿಗಮವು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತದ ಈಕ್ವಿಟಿ ಷೇರುಗಳಲ್ಲಿನ ತನ್ನ ಷೇರುಗಳನ್ನು 5,82,22,948ರಿಂದ 7,43,79,924ಕ್ಕೆ ಹೆಚ್ಚಿಸಿದೆ. ಅಂದರೆ ಹೂಡಿಕೆ ಪ್ರಮಾಣ ಶೇ. 7.278ರಿಂದ ಶೇ. 9.298ಕ್ಕೆ ಏರಿದೆʼʼ ಎಂದು ಮೂಲಗಳು ತಿಳಿಸಿವೆ. ಎಲ್ಐಸಿ ಷೇರುಗಳ ಮೌಲ್ಯ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಶೇ. 1ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಎನ್ಎಸ್ಇಯಲ್ಲಿ ಪ್ರತಿ ಷೇರಿಗೆ 1,042.9 ರೂ. ಕಂಡು ಬಂದಿದೆ. ಐಆರ್‌ಟಿಸಿ ಷೇರುಗಳು ಶೇ. 1.24ರಷ್ಟು ಹೆಚ್ಚಾಗಿದೆ.

ಲಾಭಾಂಶ ಪಾವತಿ

ಸಾರ್ವಜನಿಕ ವಲಯದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿ ಕಳೆದ ತಿಂಗಳು ದೊಡ್ಡ ಮೊತ್ತದ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 3,662.17 ಕೋಟಿ ರೂ. ಮೌಲ್ಯದ ಡಿವಿಡೆಂಡ್ ಚೆಕ್ ಅನ್ನು ಭಾರತೀಯ ಜೀವ ವಿಮಾ ನಿಗಮ ಹಸ್ತಾಂತರಿಸಿತ್ತು.

6,103.62 ಕೋಟಿ ರೂ.ಗಳ ಲಾಭಾಂಶ

ಇದಲ್ಲದೆ 2024ರ ಮಾರ್ಚ್ 1ರಂದು ಕೇಂದ್ರ ಸರ್ಕಾರ ಎಲ್ಐಸಿಯಿಂದ ಭಾರೀ ಮೊತ್ತದ ಮಧ್ಯಂತರ ಲಾಭಾಂಶ ಪಡೆದಿತ್ತು. ಈ ಸಂದರ್ಭದಲ್ಲಿ ಎಲ್‌ಐಸಿ 2,441.45 ಕೋಟಿ ರೂ. ಮಧ್ಯಂತರ ಲಾಭಾಂಶವನ್ನು ಕೇಂದ್ರಕ್ಕೆ ಪಾವತಿಸಿತ್ತು. ಇದರಿಂದಾಗಿ 2023-24ನೇ ಸಾಲಿನಲ್ಲಿ ಒಟ್ಟು 6,103.62 ಕೋಟಿ ರೂ.ಗಳ ಲಾಭಾಂಶವನ್ನು ಎಲ್‌ಐಸಿ ಕೇಂದ್ರಕ್ಕೆ ಹಸ್ತಾಂತರಿಸಿದಂತಾಗಿದೆ. ಮಾತ್ರವಲ್ಲ ಎಲ್‌ಐಸಿ ಮೇ 27ರಂದು ಪ್ರತಿ ಷೇರಿಗೆ 6 ರೂ.ಗಳ ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು. ಎಲ್ಐಸಿ ಸ್ಥಾಪನೆಯಾಗಿ 68 ವರ್ಷ ಪೂರ್ತಿಯಾಗಿದ್ದು, ಪ್ರಸ್ತುತ 52.85 ಲಕ್ಷ ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದೆ.

ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಹೆಚ್ಚುವರಿ ಕಾಲಾವಕಾಶ

ಈ ವರ್ಷದ ಮೇಯಲ್ಲಿ ಸಾರ್ವಜನಿಕರ ಷೇರುಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ 3 ವರ್ಷ ಹೆಚ್ಚುವರಿ ಕಾಲಾವಕಾಶ ನೀಡಿತ್ತು. ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು ಶೇ. 3.5ರಷ್ಟಿದೆ. ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ ಪ್ರಕಾರ ಪಬ್ಲಿಕ್ ಷೇರು ಪಾಲನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ. ಲಿಸ್ಟ್ ಆದ ಎರಡು ವರ್ಷದೊಳಗೆ ಈ ಕೆಲಸ ಆಗಬೇಕು. ಎಲ್​ಐಸಿ 2022ರ ಮೇ 17ರಂದು ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಲಿಸ್ಟ್ ಆಗಿತ್ತು. ಅದರಂತೆ 2024ರ ಮೇ 16ರೊಳಗೆ ಪಬ್ಲಿಕ್ ಶೇರ್​ಹೋಲ್ಡಿಂಗ್ ಶೇ. 10 ಆಗಬೇಕಿತ್ತು. ಅದಿನ್ನೂ ಆಗಿಲ್ಲ. ಸದ್ಯ ಎಲ್‌ಐಸಿ ರಿಲೀಫ್‌ ಪಡೆದಿದ್ದು, 2027ರ ಮೇ 16ರವರೆಗೂ ಕಾಲಾವಕಾಶ ಒದಗಿಸಲಾಗಿದೆ. ಸದ್ಯ ಸುಮಾರು 22 ಕೋಟಿಯಷ್ಟು ಎಲ್‌ಐಸಿ ಷೇರುಗಳು ಸಾರ್ವಜನಿಕರಿಗೆ ಮಾರಾಟವಾಗಿವೆ.

ಸುದ್ದಿಯನ್ನೂ ಓದಿ: UPI Lite: ಯುಪಿಐ ಲೈಟ್‌ ಬಳಕೆದಾರರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ಆಟೋ ಟಾಪ್‌-ಅಪ್‌ ಫೀಚರ್‌ ಲಭ್ಯ: ಏನಿದರ ವೈಶಿಷ್ಟ್ಯ?