Friday, 22nd November 2024

Money Tips: ಗೂಗಲ್‌ ಪೇ ಅಥವಾ ಫೋನ್‌ ಪೇಯಿಂದ ತಪ್ಪಾದ ನಂಬರ್‌ಗೆ ಹಣ ಪಾವತಿಸಿದರೆ ಏನು ಮಾಡಬೇಕು?

upi payment

ಬೆಂಗಳೂರು: ಇದು ಡಿಜಿಟಲ್‌ ಯುಗ. ಹಣ ಪಾವತಿಯಂತೂ ಬಹುತೇಕ ಡಿಜಿಟಲ್‌ ರೂಪದಲ್ಲೇ ನಡೆಯುತ್ತಿದೆ (Digital payment). ನಗದು ಕೈಯಲ್ಲಿ ಹಿಡಿದು ಓಡಾಡುವವರೇ ವಿರಳ ಎಂಬಂತಾಗಿದೆ. ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲಡೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಹಣ ಪಾವತಿಸುವ ವಿಧಾನ ಜನಪ್ರಿಯವಾಗಿದೆ. ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂನಂತಹ ಅಪ್ಲಿಕೇಷನ್‌ಗಳು ಪಾವತಿ ವಿಧಾನವನ್ನು ಸರಳಗೊಳಿಸಿದ್ದು, ಯಾರೂ ಬೇಕಾದರೂ ಬಳಸಬಹುದಾಗಿದೆ. ಅದಾಗ್ಯೂ ಕೆಲವೊಮ್ಮೆ ನಮ್ಮ ಕಣ್ತಪ್ಪಿನಿಂದಾಗಿ ಹಣ ತಪ್ಪಾದ ನಂಬರ್‌ಗೆ ವರ್ಗಾವಣೆಯಾಗುತ್ತದೆ. ಈ ವೇಳೆ ನಾವೇನು ಮಾಡಬೇಕು? ಪಾವತಿಯಾದ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ವಿವರ (Money Tips).

ಒಂದುವೇಳೆ ನೀವು ತಪ್ಪಾದ ನಂಬರ್‌ಗೆ ಹಣ ವರ್ಗಾಯಿಸಿದರೆ ಕೂಡಲೇ ದೂರು ನೀಡಬೇಕಾಗುತ್ತದೆ. ಅದಕ್ಕಾಗಿ ಈ ಮಾರ್ಗಗಳನ್ನು ಅನುಸರಿಸಿ:

ಯುಪಿಐ ವಹಿವಾಟುಗಳಿಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India-NPCI) ಪೋರ್ಟಲ್‌ನಲ್ಲಿ ದೂರು ಸಲ್ಲಿಸಬೇಕು.

ಹೀಗೆ ಮಾಡಿ: ಎನ್‌ಪಿಸಿಐಯ ವೆಬ್‌ಸೈಟ್‌ npci.org.inಗೆ ಭೇಟಿ ನೀಡಿ. ಬಳಿಕ ಅಲ್ಲಿ ಕಂಡುಬರುವ ‘Dispute Redressal Mechanism’ ಆಯ್ಕೆಯನ್ನು ಕ್ಲಿಕ್‌ ಮಾಡಿ. Complaint ಸೆಕ್ಷನ್‌ನಲ್ಲಿ ಈ ಕೆಳಗಿನ ಮಾಹಿತಿ ನಮೂದಿಸಿ:
ಯುಪಿಐ ಟ್ರಾನ್ಸಾಕ್ಷನ್‌ ಐಡಿ (UPI transaction ID), ವರ್ಚುವಲ್‌ ಪೇಮೆಂಟ್‌ ಅಡ್ರೆಸ್‌ (Virtual payment address), ವರ್ಗಾಯಿಸಿದ ಮೊತ್ತ, ಹಣ ವರ್ಗಾಯಿಸಿದ ದಿನಾಂಕ, ನಿಮ್ಮ ಇಮೇಲ್‌ ಐಡಿ, ಮೊಬೈಲ್‌ ನಂಬರ್‌ ನೀಡಿ. ಜತೆಗೆ ನಿಮ್ಮ ಖಾತೆಯಿಂದ ಮೊತ್ತ ಕಡಿತವಾಗಿರುವುದನ್ನು ತೋರಿಸುವ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಹ ಅಪ್‌ಲೋಡ್ ಮಾಡಬೇಕು.

ಈ ದೂರಿನ ಅರ್ಜಿಯನ್ನು ಭರ್ತಿ ಮಾಡುವಾಗ ʼಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ’ (Incorrectly transferred to another account) ಎಂಬ ಕಾರಣವನ್ನು ನಮೂದಿಸಬೇಕು.

ಎನ್‌ಪಿಸಿಐ ವೆಬ್‌ಸೈಟ್‌ ಪ್ರಕಾರ, ಪಾವತಿಯನ್ನು ಪಿಎಸ್‌ಪಿ (Payment Service Provider Bank) ಬ್ಯಾಂಕ್ / ಟಿಪಿಎಪಿ (Third-Party Application Providers) ಮೂಲಕ ಮಾಡಿದ್ದರೆ ಕುಂದುಕೊರತೆಗಳು / ದೂರುಗಳನ್ನು ಮೊದಲು ಟಿಪಿಎಪಿ ಬೋರ್ಡ್‌ಗೆ ನೀಡಲಾಗುತ್ತದೆ. ಒಂದು ವೇಳೆ ಇಲ್ಲಿ ದೂರು/ ಕುಂದುಕೊರತೆ ಬಗೆಹರಿಯದಿದ್ದರೆ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅಥವಾ ಡಿಜಿಟಲ್ ದೂರುಗಳಿಗಾಗಿ ಇರುವ ಒಂಬುಡ್ಸ್‌ಮನ್‌ಗೆ ವರ್ಗಾಯಿಸಲಾಗುತ್ತದೆ.

ಡಿಜಿಟಲ್‌ ಪಾವತಿಗಾಗಿ ಆರ್‌ಬಿಐ ಒಂಬುಡ್ಸ್‌ಮನ್‌

ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ವಹಿವಾಟುಗಳಿಗಾಗಿಯೇ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿದ್ದು, ಅವರು ಡಿಜಿಟಲ್ ಪಾವತಿ ವ್ಯವಸ್ಥೆಯ ದೂರುಗಳನ್ನು ನಿರ್ವಹಿಸುತ್ತಾರೆ.

ಆರ್‌ಬಿಐ ಒಂಬುಡ್ಸ್‌ಮನ್‌ಗೆ ಯಾವಾಗ ದೂರು ನೀಡಬೇಕು?

ಒಂದು ತಿಂಗಳ ನಂತರವೂ ನಿಮ್ಮ ದೂರು ಬಗೆಹರಿಯದಿದ್ದರೆ ಅಥವಾ ಅವರು ನೀಡಿದ ಪ್ರತಿಕ್ರಿಯೆಯಿಂದ ಅತೃಪ್ತರಾಗಿದ್ದರೆ ನೀವು ಸಮಸ್ಯೆಯನ್ನು ಡಿಜಿಟಲ್ ವಹಿವಾಟುಗಳಿಗಾಗಿ ಇರುವ ಆರ್‌ಬಿಐ ಒಂಬುಡ್ಸ್‌ಮನ್‌ ಗಮನಕ್ಕೆ ತರಬಹುದು. ನಿಮ್ಮ ವ್ಯಾಪ್ತಿಗೆ ಬರುವ ಶಾಖೆಯಲ್ಲಿ ದೂರು ನೀಡಬಹುದು. ಈ ಮೂಲಕ ನಿಮ್ಮ ಖಾತೆಯಿಂದ ಪಾವತಿಯದ ಹಣವನ್ನು ಮರಳಿ ಪಡೆಯಬಹುದು.

ಈ ಸುದ್ದಿಯನ್ನೂ ಓದಿ: Money Tips: ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ