Wednesday, 23rd October 2024

Online Shopping: ಆಫರ್ ನೋಡಿ ಮರುಳಾಗಬೇಡಿ; ಆನ್‌ಲೈನ್‌ ಶಾಪಿಂಗ್ ವೇಳೆ ಇರಲಿ ಎಚ್ಚರ

Online Shopping

ಹಬ್ಬಗಳು ಸಮೀಪಿಸುತ್ತಿದ್ದಂತೆ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ(E-commerce platforms) ಭಾರಿ ರಿಯಾಯಿತಿ (Huge discount), ವಿಶೇಷ ಕೊಡುಗೆಗಳು (special offer) ಕಾಣಿಸಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ (Online Shopping) ಮಾಡುವ ಉತ್ಸಾಹವು ಹೆಚ್ಚಾಗಿದೆ. ಈ ನಡುವೆ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಕೆಲವೊಮ್ಮೆ ನಕಲಿ ಉತ್ಪನ್ನ, ಅತಿಯಾದ ಖರ್ಚುಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ. ಆನ್‌ಲೈನ್ ನಲ್ಲಿ ಶಾಪಿಂಗ್ ಮಾಡುವ ಮೊದಲು ಕೆಲವು ಅಂಶಗಳನ್ನು ಗಮನಿಸುವುದು ಮುಖ್ಯವಾಗಿದೆ. ಇದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು.

ವೆಬ್‌ಸೈಟ್‌ನ ದೃಢೀಕರಣ

ಖರೀದಿ ಮಾಡುವ ಮೊದಲು ಪ್ರತಿಷ್ಠಿತ ಇ-ಕಾಮರ್ಸ್ ಸೈಟ್‌ನಿಂದ ಶಾಪಿಂಗ್ ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವೆಬ್‌ಸೈಟ್‌ನ ಭದ್ರತೆಯನ್ನು ಸೂಚಿಸುವ “https://” ಮತ್ತು ವಿಳಾಸದಲ್ಲಿರುವ ಪ್ಯಾಡ್‌ಲಾಕ್ ಐಕಾನ್ ಅನ್ನು ಪರಿಶೀಲಿಸಿ. ವೆಬ್‌ಸೈಟ್‌ನ ವಿಶ್ವಾಸಾರ್ಹತೆ ಪರಿಶೀಲಿಸಲು ಇತರ ಗ್ರಾಹಕರ ವಿಮರ್ಶೆ ಮತ್ತು ರೇಟಿಂಗ್‌ಗಳನ್ನು ನೋಡಿ.

Online Shopping

ಡೀಲ್‌ಗಳ ಬಗ್ಗೆ ಎಚ್ಚರ

ಇ- ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಅನೇಕ ಆಕರ್ಷಕ ಮಾರ್ಕೆಟಿಂಗ್ ತಂತ್ರಗಳನ್ನು ಬಳಸುತ್ತವೆ. ಬೃಹತ್ ರಿಯಾಯಿತಿಗಳು ಮತ್ತು ಸೀಮಿತ ಸಮಯದ ಕೊಡುಗೆಗಳನ್ನು ಪ್ರದರ್ಶಿಸುತ್ತವೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಬೇರೆಬೇರೆ ವೆಬ್‌ಸೈಟ್‌ಗಳಲ್ಲಿ ಈ ಬಗ್ಗೆ ಹೋಲಿಕೆ ಮಾಡಿ ನೋಡಿದ ಬಳಿಕ ನಿಮಗೆ ನಿಜವಾಗಿಯೂ ಆ ಉತ್ಪನ್ನದ ಅಗತ್ಯವಿದ್ದರೆ ಮಾತ್ರ ಖರೀದಿ ಮಾಡಿ.

ಹಿಂದಿರುಗಿಸುವಿಕೆ ಮತ್ತು ಮರುಪಾವತಿ ಬಗ್ಗೆ ತಿಳಿಯಿರಿ

ಖರೀದಿಯನ್ನು ಅಂತಿಮಗೊಳಿಸುವ ಮೊದಲು ವಸ್ತುವನ್ನು ಹಿಂದಿರುಗಿಸುವಾಗ ಮತ್ತು ಮರುಪಾವತಿ ನೀತಿಗಳ ಬಗ್ಗೆ ತಿಳಿದುಕೊಳ್ಳಿ. ಕೆಲವು ಪ್ಲಾಟ್‌ಫಾರ್ಮ್‌ಗಳು ಸಂಕೀರ್ಣ ಪ್ರಕ್ರಿಯೆಗಳನ್ನು ಒಳಗೊಂಡಿರಬಹುದು ಮತ್ತು ಇದಕ್ಕೆ ಶುಲ್ಕ ವಿಧಿಸಬಹುದು. ಉತ್ಪನ್ನವು ನಿಮಗಿಷ್ಟವಾಗುವಂತೆ ಇಲ್ಲದೇ ಇದ್ದರೆ ನಿಯಮಗಳನ್ನು ಮೊದಲೇ ತಿಳಿದುಕೊಂಡಿರುವುದು ಒಳ್ಳೆಯದು.

ಉತ್ಪನ್ನದ ದೃಢೀಕರಣ

ವಿಶೇಷ ಸಂದರ್ಭಗಳಲ್ಲಿ ನಕಲಿ ಉತ್ಪನ್ನಗಳ ಹಾವಳಿ ಹೆಚ್ಚಾಗಿರುತ್ತದೆ. ಮಾರಾಟಗಾರರ ರೇಟಿಂಗ್‌ಗಳು ಮತ್ತು ಉತ್ಪನ್ನ ವಿಮರ್ಶೆಗಳನ್ನು ಯಾವಾಗಲೂ ಪರಿಶೀಲಿಸಿ ಖರೀದಿ ಮಾಡುವುದು ಒಳ್ಳೆಯದು. ಉತ್ಪನ್ನವು ಮಾರುಕಟ್ಟೆ ಮೌಲ್ಯಕ್ಕಿಂತ ಅಗ್ಗವಾಗಿದ್ದರೆ ಗುಣಮಟ್ಟದಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ. ಹೀಗಾಗಿ ಮೊದಲು ಸರಿಯಾಗಿ ಪರಿಶೀಲಿಸಿ.

ಸುರಕ್ಷಿತ ಪಾವತಿ

ಹೆಚ್ಚಿನ ಮೌಲ್ಯದ ವಹಿವಾಟುಗಳಿಗಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್ ಬಳಸುವಾಗ ಎಚ್ಚರಿಕೆಯಿಂದ ಇರಿ. ಅನಧಿಕೃತ ವಹಿವಾಟುಗಳ ಅಪಾಯವನ್ನು ಕಡಿಮೆ ಮಾಡಲು ಇ-ಕಾಮರ್ಸ್ ಸೈಟ್‌ಗಳಲ್ಲಿ ಪಾವತಿ ವಿವರಗಳನ್ನು ಉಳಿಸುವುದನ್ನು ತಪ್ಪಿಸಿ.

ವೈಯಕ್ತಿಕ ಮಾಹಿತಿ

ಇ-ಕಾಮರ್ಸ್ ಸೈಟ್‌ಗಳು ವಹಿವಾಟಿಗೆ ಅಗತ್ಯಕ್ಕಿಂತ ಹೆಚ್ಚಿನ ವೈಯಕ್ತಿಕ ವಿವರಗಳನ್ನು ವಿನಂತಿಸಬಹುದು. ಮಿತಿಮೀರಿದ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಮಾಹಿತಿಯನ್ನು ಯಾವ ಉದ್ದೇಶಕ್ಕೆ ಪಡೆಯಲಾಗುತ್ತದೆ, ಅದನ್ನು ಹೇಗೆ ಸುರಕ್ಷಿತವಾಗಿ ಇರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಫಿಶಿಂಗ್ ಹಗರಣಗಳ ಬಗ್ಗೆ ಎಚ್ಚರ

ಹಬ್ಬದ ಸಮಯದಲ್ಲಿ ಫಿಶಿಂಗ್ ಹಗರಣಗಳು ಹೆಚ್ಚಾಗಿರುತ್ತವೆ. ವಿಶೇಷ ಡೀಲ್‌ಗಳನ್ನು ನೀಡುವ ಅನುಮಾನಾಸ್ಪದ ಇ-ಮೇಲ್‌ ಅಥವಾ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ. ಬ್ರೌಸರ್ ಮೂಲಕ ನೇರವಾಗಿ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಖರೀದಿ ಮಾಡಿ.

Online Shopping

ಬೆಲೆ ಹೋಲಿಕೆ

ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ಪನ್ನ ಬೆಲೆಗಳನ್ನು ಮೌಲ್ಯಮಾಪನ ಮಾಡಿ. ಇದು ಉತ್ತಮ ಡೀಲ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಸಮಯ- ಸೀಮಿತ ಕೊಡುಗೆಗಳಿಗೆ ಮರುಳಾಗದಿರಿ.

ಬಜೆಟ್ ಗೆ ಬದ್ಧವಾಗಿರಿ

ಅನೇಕ ಆಕರ್ಷಕ ಡೀಲ್‌ಗಳು ನಿಮ್ಮನ್ನು ಮೋಡಿ ಮಾಡಬಹುದು. ಹಬ್ಬದ ಶಾಪಿಂಗ್‌ಗಾಗಿ ಬಜೆಟ್ ಅನ್ನು ಮೊದಲೇ ನಿರ್ಧರಿಸಿ. ನಿಜವಾಗಿಯೂ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಮಾಡಿ. ಮೋಡಿ ಮಾಡುವ ಮಾರ್ಕೆಟಿಂಗ್ ತಂತ್ರಗಳಿಗೆ ಮಾರುಹೋಗಬೇಡಿ. ಉತ್ಪನ್ನ ವಿವರಣೆಗಳನ್ನು ಗಮನಿಸಿ.

Gold Price Today: ನವರಾತ್ರಿ ಹೊತ್ತಿನಲ್ಲಿ ಗುಡ್‌ನ್ಯೂಸ್‌; ಚಿನ್ನದ ಬೆಲೆ ಮತ್ತಷ್ಟು ಇಳಿಕೆ

ಉತ್ಪನ್ನದ ಚಿತ್ರ ಅಥವಾ ಶೀರ್ಷಿಕೆಗಳನ್ನು ಮಾತ್ರ ನೋಡಿ ಖರೀದಿಸಲು ಹೋಗಬೇಡಿ. ಉತ್ಪನ್ನವು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ವಿವರಣೆ, ವಿಶೇಷಣಗಳನ್ನು ಸಂಪೂರ್ಣವಾಗಿ ಎಚ್ಚರಿಕೆಯಿಂದ ಓದಿ. ಗ್ರಾಹಕರ ವಿಮರ್ಶೆಗಳು ಉತ್ಪನ್ನದ ಗುಣಮಟ್ಟದ ಬಗ್ಗೆ ನಿಖರ ಮಾಹಿತಿ ನೀಡುತ್ತದೆ.