ವಾಷಿಂಗ್ಟನ್:
ಮಹಾಮಾರಿ ಕರೋನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆೆ 76 ಸಾವಿರಕ್ಕೇರಿದ್ದು, ನಾಲ್ಕೈದು ದಿನಗಳಲ್ಲಿ ಒಂದು ಲಕ್ಷ ಮಂದಿ ಅಸುನೀಗುವ ಆತಂಕವಿದೆ. ಸೂಪರ‌್ವವರ್ ರಾಷ್ಟ್ರದಲ್ಲಿ. ಈವರೆಗೆ 12.75 ಲಕ್ಷಕ್ಕೂ ಅಧಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದು, ಅನೇಕರ ಸ್ಥಿತಿ ಶೋಚನೀಯವಾಗಿದೆ.
ಕೋವಿಡ್-19 ವೈರಸ್ ನಿಗ್ರಹಕ್ಕಾಗಿ ಇಡೀ ಅಮೆರಿಕಾದ ವೈದ್ಯಲೋಕವೇ ಹೊಸ ಲಸಿಕೆ ಸಂಶೋಧನೆಯಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ. ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಈಗಾಗಲೇ ಮಹಾಮಾರಿ ಕರೋನಾ ದಾಳಿಯಿಂದ ಕಂಗೆಟ್ಟಿದ್ದು, ಜೂನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಜೂನ್‌ನಲ್ಲಿ ಪ್ರತಿದಿನ ವೈರಾಣು ಸರಾಸರಿ 3 ಸಾವಿರ ಜನರನ್ನು ಬಲಿತೆಗೆದುಕೊಳ್ಳಲಿದ್ದು, ದಿನಕ್ಕೆ ಸುಮಾರು ಎರಡು ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್‌ಸ್ ಅವರ ವಕ್ತಾರಿಣಿ (ಮಾಧ್ಯಮ ವಿಭಾಗದ ಅಧಿಕಾರಿಣಿ) ಕ್ಯಾಟೀ ಮಿಲ್ಲರ್ ಅವರಿಗೂ ವೈರಸ್ ಸೋಂಕು ಕಾಣಿಸಿಕೊಂಡಿದೆ. ಇದು ಕಳೆದ ಒಂದು ವಾರದಲ್ಲಿ ಶ್ವೇತಭವನದ ಉನ್ನತಾಧಿಕಾರಿಗಳಿಗೆ ತಗುಲಿರುವ ಎರಡನೇ ವೈರಸ್ ಪ್ರಕರಣವಾಗಿದೆ.