ಬೆಂಗಳೂರು:
ದೇಶಾದ್ಯಂತ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮೊದಲಾದವರ ಪಾತ್ರ ಬಹಳ ಮಹತ್ವದ್ದು.
ಅವರ ಸೇವೆಗೆ ಕೃತಜ್ಞತೆ ಅರ್ಪಿಸಲು ಭಾರತೀಯ ವಾಯುಪಡೆ ವಿಮಾನ ಮತ್ತು ಹೆಲಿಕಾಪ್ಟರ್ಗಳು ದೇಶಾದ್ಯಂತ ವಿವಿಧೆಡೆ ಪುಷ್ಪಾರ್ಚನೆ ಮಾಡಿವೆ. ಈ ಮೂಲಕ ಕೊರೊನಾ ವಾರಿಯರ್‌ಸ್‌ಗೆ ಮತ್ತೊಮ್ಮೆ ನಮನ ಸಲ್ಲಿಸಲಾಗಿದೆ.
ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಂಡಿರುವ ವಿಕ್ಟೋರಿಯಾ ಆಸ್ಪತ್ರೆಯ ಮೇಲೂ ವಾಯುಪಡೆ ಕಾಪ್ಟರ್ವೊಂದರಿಂದ ಮೇಲಿನಿಂದ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಎಲ್ಲರೂ ಹೊರಗಿನ ಆವರಣದಲ್ಲಿ ನಿಂತು ಚಪ್ಪಾಳೆ ತಟ್ಟಿ ವಾಯುಪಡೆ ಹೆಲಿಕಾಪ್ಟರನ್ನ ಸ್ವಾಗತಿಸಿದರು.
ಅದೇ ರೀತಿ ದೇಶದ ವಿವಿಧೆಡೆ ಆಸ್ಪತ್ರೆ ಮತ್ತಿತರೆಡೆ ವಾಯುಪಡೆ ಚಾಪರ್ಗಳು ಮೇಲಿನಿಂದ ಪುಷ್ಪಗಳನ್ನ ಚೆಲ್ಲಿದವು. ಹರಿಯಾಣದ ಪಂಚಕುಲಾದ ಸರ್ಕಾರಿ ಆಸ್ಪತ್ರೆ, ಗೋವಾದ ಪಣಜಿಯಲ್ಲಿರುವ ಮೆಡಿಕಲ್ ಕಾಲೇಜು, ಒಡಿಶಾದ ಭುಬನೇಶ್ವರ್ನ ಕಳಿಂಗ ವೈದ್ಯಕೀಯ ಕಾಲೇಜು, ಲಕ್ನೋನ ಕಿಂಗ್ ಜಾರ್ಜ್ ಮೆಡಿಕಲ್ ವಿವಿ, ಹೈದರಾಬಾದ್ನ ಗಾಂಧಿ ಆಸ್ಪತ್ರೆ, ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆ, ಶಿಲಾಂಗ್ನ ಸಾರ್ವಜನಿಕ ಆಸ್ಪತ್ರೆ ಹೀಗೆ ವಿವಿಧೆಡೆ ಪುಷ್ಪನಮನ ಸಲ್ಲಿಸಲಾಯಿತು.