ಮುಂಬೈ:
ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡುತ್ತಿರುವ ಪ್ರಕರಣಗಳು ದೇಶದ ವಿವಿಧೆಡೆ ಮುಂದುವರಿದಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೇ.9ರ ಬೆಳಗ್ಗೆ ಯುವಕನೊಬ್ಬ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಇಬ್ಬರು ಅಧಿಕಾರಿಗಳೂ ಸೇರಿದಂತೆ ಕೆಲ ಪೊಲೀಸರು ಗಾಯಗೊಂಡಿರುವ ಘಟನೆ ನಡೆದಿದೆ. ದಕ್ಷಿಣ ಮುಂಬೈನಲ್ಲಿ ನಾಕಾಬಂದಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಈ ದಾಳಿ ನಡೆದಿದೆ. ಬ್ರೀಚ್ ಕ್ಯಾಾಂಡಿ ಸಮೀಪದ ಸಿಲ್ವರ್ ಓಕ್ ಎಸ್ಟೇಟ್‌ನ ನಿವಾಸಿ ಕರಣ್ ಪ್ರದೀಪ್ ನಾಯರ್ (27) ಚಾಕುವಿನಿಂದ ಪೊಲೀಸ್ ಸಿಬ್ಬಂದಿಗೆ ಇರಿದಿದ್ದಾನೆ ಎಂದು ಮರೈನ್ ಡ್ರೈವ್ ಪೊಲೀಸ್ ಠಾಣೆ ಹಿರಿಯ ಪೊಲೀಸ್ ಇನ್ಸೆೆಪೆಕ್ಟರ್ ಮೃತ್ಯುಂಜಯ ಹಿರೇಮಠ್ ತಿಳಿಸಿದ್ದಾರೆ.
ಈ ದುಷ್‌ಕೃತ್ಯದಲ್ಲಿ ಮರೈನ್ ಡ್ರೈವ್ ಪೊಲೀಸ್ ಸ್ಟೇಷನ್‌ನ ಇಬ್ಬರು ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗೆ ಗಾಯಗಳಾಗಿದ್ದು, ಸರಕಾರಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಾಣಾಪಾಯದಿಂದ ಪಾರಾಗಿದ್ದಾರೆ. ಪ್ರಾಣ್‌ಸುಖ್‌ಲಾಲ್ ಮಫತ್‌ಲಾಲ್ ಹಿಂದು ಸ್ವಿಮ್ಮಿಿಂಗ್ ಪೂಲ್ ಮತ್ತು ಬೋಟ್ ಕ್ಲಬ್ ಬಳಿ ಯುವಕ ದೊಡ್ಡ ಚಾಕುವಿನೊಂದಿಗೆ ತೆರಳುತ್ತಿದ್ದಾಗ, ಪೊಲೀಸರು ಆತನ್ನು ತಡೆಯಲು ಯತ್ನಿಸಿದರು. ಆಗ ಪರಾರಿಯಾಗುತ್ತಿದ್ದ ಯುವಕನನ್ನು ಹಿಡಿಯಲು ಪೊಲೀಸರು ಮುಂದಾದಾಗ ಆತ ಚಾಕುವಿನಿಂದ ದಾಳಿ ನಡೆಸಿದ. ಈ ಘಟನೆಯಲ್ಲಿ ಪೊಲೀಸರಿಗೆ ಭುಜ ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ಠಾಣಾಧಿಕಾರಿ ಹಿರೇಮಠ್ ತಿಳಿಸಿದ್ದಾರೆ.
ಆರ್ಕಿಟೆಕ್ಚರ್ ಪದವೀಧರನಾದ ನಾಯರ‌್ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇತ್ತೀಚೆಗೆ ಪಂಜಾಬ್‌ನ ಅಮೃತಸರದಲ್ಲಿ ನಾಕಾಬಂದಿ ವೇಳೆ ವಾಹನ ಅಡ್ಡಗಟ್ಟಿದ ಪೊಲೀಸ್ ಸಬ್ ಇನ್‌ಸ್‌ಪೆಕ್ಟರ್ ಒಬ್ಬರ ಕೈಯನ್ನು ದುಷ್ಕರ್ಮಿಗಳು ಕತ್ತರಿಸಿದ್ದರು. ಈ ಸಂಬಂಧ ಏಳು ಜನರನ್ನು ಬಂಧಿಸಲಾಗಿತ್ತು.