Sunday, 15th December 2024

ಕೊರೋನಾ ತೊಲಗಿಸಲು ವ್ಯಕ್ತಿಯ ಬಲಿಕೊಟ್ಟ ಅರ್ಚಕ!

ಭುವನೇಶ್ವರ

ಆಘಾತಕಾರಿ ಘಟನೆಯೊಂದರಲ್ಲಿ ಎಪ್ಪತ್ತು ವರ್ಷದ ಅರ್ಚಕರೊಬ್ಬರು ಕರೋನಾ ಮಹಾಮಾರಿ ತೊಲಗಿಸುವ ಸಲುವಾಗಿ ವ್ಯಕ್ತಿಯೊಬ್ಬನನ್ನು ಬಲಿಕೊಟ್ಟಿದ್ದಾರೆ.

ಕರೋನಾ ವೈರಾಣುವನ್ನು ಓಡಿಸಲು ದೇವತೆ ಕನಸಿನಲ್ಲಿ ಬಂದು ನೀಡಿದ ಆದೇಶದಂತೆ ಬುಧವಾರ ರಾತ್ರಿ ದೇವಾಲಯದ ಆವರಣದಲ್ಲಿ ಆತನ ದೇಹವನ್ನು ಬಲಿಕೊಟ್ಟಿರುವುದಾಗಿ ಸ್ವತಃ ಅರ್ಚಕ ಹೇಳಿಕೆ ನೀಡಿದ್ದಾರೆ. ಈ ಭೀಕರ ಘಟನೆ ಕಟಕ್ ಜಿಲ್ಲೆಯ ನರಸಿಂಗ್‌ಪುರದ ಬ್ಲಾಕ್‌ನ ಬಾಂಧಹುಡಾ ಗ್ರಾಮದಲ್ಲಿರುವ ಬ್ರಹ್ಮಾಣಿ ದೇವಾಲಯದ ಒಳಗೆ ನಡೆದಿದೆ.

ಕೃತ್ಯ ನಡೆಸಿದ ಅರ್ಚಕ ಸಂಸಾರಿ ಓಜಾ (70) ಗುರುವಾರ ಪೊಲೀಸರ ಮುಂದೆ ಶರಣಾಗಿದ್ದು, ಕರೋನಾ ವೈರಸ್ ಅನ್ನು ತೊಲಗಿಸಲು ದೇವತೆಯನ್ನು ತೃಪ್ತಿಪಡಿಸುವ ಸಲುವಾಗಿ ವ್ಯಕ್ತಿಯನ್ನು ಬಲಿಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅಲೋಕ್ ರಂಜನ್ ರೇ ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸರೋಜ್ ಕುಮಾರ್ ಪ್ರಧಾನ್ (52) ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಗ್ರಾಮದ ಹೊರವಲಯದಲ್ಲಿರುವ ಮಾವಿನ ತೋಟದ ವಿಷಯದಲ್ಲಿ ಅರ್ಚಕ ಮೃತನೊಂದಿಗೆ ಹಳೆಯ ವಿವಾದವನ್ನು ಹೊಂದಿದ್ದು, ಪ್ರತೀಕಾರವಾಗಿ ಆತನನ್ನು ಕೊಂದಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.