Sunday, 15th December 2024

ಭಾರತದಲ್ಲಿ ಕರೋನಾಗೆ ಒಂದು ದಿನಕ್ಕೆ 134 ಸಾವು, 3,722 ಮಂದಿಗೆ ಪಾಸಿಟಿವ್

ಮುಂಬೈ:

ಕರೋನಾ ಹಾವಳಿ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೇಶದಲ್ಲಿ ಕರೋನಾ ವೈರಸ್ ಆರ್ಭಟ ಲಾಕ್‌ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿದ್ದು, ರಾಷ್ಟ್ರವ್ಯಾಪಿ ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.

ಭಾರತದಲ್ಲಿ ಸಾವಿನ ಸಂಖ್ಯೆ 2,500 ದಾಟಿದ್ದು, ಸೋಂಕು ಪೀಡಿತರ ಸಂಖ್ಯೆಯೂ 80 ಸಾವಿರ ಸನಿಹದಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಕಳೆದ ಒಂದು ದಿನದಲ್ಲಿ 134 ಸಾವು ಮತ್ತು 3,722 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಸಿದೆ.

ಮೂರನೇ ಹಂತದ ಲಾಕ್‌ಡೌನ್ ನಂತರ ಸತತ 10ನೇ ದಿನ ಇದು ಅತಿ ಹೆಚ್ಚು ಸೋಂಕುಗಳ ಪ್ರಕರಣವಾಗಿದೆ. ಈ ಅವಧಿಯಲ್ಲಿ
ಪ್ರತಿದಿನ ಸರಾಸರಿ 3 ಸಾವಿರ  ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಸಾಂಕ್ರಾಮಿಕ ರೋಗ ಆಘಾತಕಾರಿ ಮಟ್ಟದಲ್ಲಿ ಸ್ಫೋಟಗೊಂಡಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಚಿಂತೆಗೀಡು ಮಾಡಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.

ಬುಧವಾರ ಬೆಳಗ್ಗೆ ಯಿಂದ ರಾತ್ರಿವರೆಗೆ  ದೇಶದ ವಿವಿಧ ರಾಜ್ಯಗಳಲ್ಲಿ 134 ಮಂದಿಯನ್ನು ಕರೋನಾ ಬಲಿ ತೆಗೆದುಕೊಂಡಿದೆ.
ಮಹಾರಾಷ್ಟ್ದಲ್ಲಿ 54, ಗುಜರಾತ್‌ನಲ್ಲಿ 29, ದೆಹಲಿ 20, ಪಶ್ಚಿಮ ಬಂಗಾಳ ಒಂಬತ್ತು, ಮಧ್ಯಪ್ರದೇಶ ಏಳು, ರಾಜಸ್ತಾನ ನಾಲ್ಕು, ತಮಿಳುನಾಡು ಮೂರು, ತೆಲಂಗಾಣ ಮತ್ತು ಕರ್ನಾಟಕ ತಲಾ ಎರಡು, ಹಾಗೂ ಆಂಧ್ರಪ್ರದೇಶ, ಬಿಹಾರ, ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶ ತಲಾ ಒಂದೊಂದು ಸಾವು ಸಂಭವಿಸಿದೆ.

ಬುಧವಾರ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಡೆಡ್ಲಿ ಕರೋನಾ  ವೈರಸ್‌ಗೆ  ಬಲಿಯಾದವರ ಸಂಖ್ಯೆ 2,549ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 78,003 ತಲುಪಿದೆ. ಗುರುವಾರ ರಾತ್ರಿಯೊಳಗೆ ಸೋಂಕಿತರ ಪ್ರಮಾಣ 82 ಸಾವಿರ ದಾಟುವ ಆತಂಕ ಉಂಟಾಗಿದೆ.

ಲಾಕ್‌ಡೌನ್ ಸಡಿಲ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕರೋನಾ ಮಹಾಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಜತೆಗೆ  ಸಮುದಾಯ ಸೋಂಕಿನ ಸಾಧ್ಯತೆಯ ಭಯವೂ ಆವರಿಸಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.33.63ರಷ್ಟು ಸುಧಾರಣೆ ಕಂಡುಬಂದಿದ್ದರೂ, ಮತ್ತೊೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಈವರೆಗೆ ಸಂಭವಿಸಿರುವ 2,549 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ.

ಆ ರಾಜ್ಯದಲ್ಲಿ ಒಟ್ಟು 975 ಸಾವುಗಳು ವರದಿಯಾಗಿವೆ. ನಂತರದ ಸ್ಥಾನಗಳಲ್ಲಿ ಗುಜರಾತ್ (566), ಮಧ್ಯಪ್ರದೇಶ (232), ಪಶ್ಚಿಮ ಬಂಗಾಳ (207), ರಾಜಸ್ತಾನ (121), ದೆಹಲಿ (106), ಉತ್ತರ ಪ್ರದೇಶ (83) ತಮಿಳುನಾಡು (64), ಆಂಧ್ರಪ್ರದೇಶ (47), ತೆಲಂಗಾಣ ( 34), ಕರ್ನಾಟಕ (33) ಮತ್ತು ಪಂಜಬ್(32) ರಾಜ್ಯಗಳಿವೆ. ಹರಿಯಾಣ ಮತ್ತು ಜಮ್ಮು-ಕಾಶ್ಮೀರ ತಲಾ 11, ಬಿಹಾರ ಏಳು, ಕೇರಳ ನಾಲ್ಕು, ಜಣರ್ಖಂಡ್, ಚಂಡಿಗಢ ಮತ್ತು ಒಡಿಶಾ ತಲಾ ಮೂರು, ಅಸ್ಸಾಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ಹಾಗೂ ಪುದುಚೇರಿ, ಮೇಘಾಲಯ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳಾಗಿವೆ.

ಕರೋನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 49.219ರಷ್ಟಿದೆ. ಈ ಮಧ್ಯೆ, ಈವರೆಗೆ 26,234 (ಚೇತರಿಕೆ ಪ್ರಮಾಣ ಶೇ.33.63) ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿ.


ಗುರುವಾರ ಬೆಳಗ್ಗೆ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದೇಶಾದ್ಯಂತ ಜಾರಿಯಲ್ಲಿರುವ ಮೂರನೇ ಹಂತದ ಲಾಕ್‌ಡೌನ್ ಮೇ 17ರ ಬಳಿಕ ಸಡಿಲಗೊಂಡರೆ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗುವ ಆತಂಕ ಉಂಟಾಗಿದೆ.