Thursday, 12th December 2024

ಭಾರತದ‌ 40 ಕೋಟಿ ಜನರು ಮತ್ತಷ್ಟು ಬಡತನಕ್ಕೆ ಜಾರಿದ್ದಾರೆ

ನ್ಯೂಯಾರ್ಕ್:

ಭಾರತದ ಅಸಂಘಟಿತ ವಲಯದ ಕಾರ್ಮಿಕರ ಮೇಲೆ ಕೋವಿಡ್ -೧೯ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಮಾರು ೪೦ ಕೋಟಿ ಜನರು ಮತ್ತಷ್ಟು ಬಡತನಕ್ಕೆ ಜಾರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಜಗತ್ತಿನಾದ್ಯಂತ ಸುಮಾರು ೧೯.೫೦ ಕೋಟಿ ಉದ್ಯೋಗಗಳು ನಷ್ಟಗೊಳ್ಳುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) “ಐಎಲ್‌ಒ ಮಾನಿಟರ್: ಕೋವಿಡ್ -೧೯ ಮತ್ತು ವರ್ಲ್ಡ್ ಆಫ್ ವರ್ಕ್” ಎಂಬ ಹೆಸರಿನ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಕೊರೊನಾ ಸಾಂಕ್ರಾಮಿಕ ರೋಗ ಎರಡನೇ ಮಹಾ ಯುದ್ಧದ ನಂತರದ ಅತ್ಯಂತ ದೊಡ್ಡ ಬಿಕ್ಕಟ್ಟು ಎಂದು ವರದಿ ವಿವರಿಸಿದೆ. ಈ ಕಷ್ಟಕಾಲದಲ್ಲಿ ತ್ವರಿತವಾಗಿ, ಸರಿಯಾದ ರೀತಿಯಲ್ಲಿ ಕೈಗೊಳ್ಳುವ ನಿರ್ಣಯಗಳು ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಐಎಲ್‌ಒ ಮಹಾನಿರ್ದೇಶಕ ಗೈ ರೈಡರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಪಂಚವ್ಯಾಪ್ತಿಯಲ್ಲಿ ಸುಮಾರು ೨೦೦ ಕೋಟಿ ಮಂದಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರ ದುಡಿಮೆಯ ಬದುಕು ಅಪಾಯದಲ್ಲಿದೆ ಎಂದು ವರದಿ ತಿಳಿಸಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳಲ್ಲಿ, ಪರಿಸ್ಥಿತಿ ಮತ್ತಷ್ಟು ದಯನೀಯ ಸ್ಥಿತಿಗೆ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಜಾರಿಗೊಳಿಸಿರುವ ಲಾಕ್‌ಡೌನ್ ಭಾರತದಲ್ಲಿ ದೈನಂದಿನ ದಿನಗೂಲಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಈಗಾಗಲೇ ದಿನಗೂಲಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.

ಜಾಗತಿಕ ಆರ್ಥಿಕತೆ ೭೫ ವರ್ಷಗಳ ಇತಿಹಾಸದಲ್ಲಿ ಇಂತಹ ಬಿಕ್ಕಟ್ಟನ್ನು ಎಂದೂ ಎದುರಿಸಿರಲಿಲ್ಲ ಎಂದು ಐಎಲ್‌ಒ ಸ್ಪಷ್ಟಪಡಿಸಿದೆ. ವಿಶ್ವದ ದೇಶಗಳ ನಡುವಿನ ಪರಸ್ಪರ ಸಹಕಾರದಿಂದ ಮಾತ್ರ ಈ ಪರಿಸ್ಥಿತಿಯನ್ನು ನಿವಾರಿಸಬಹುದು ಎಂದು ಸಲಹೆ ನೀಡಿದೆ. ಕೊರೊನಾ ವೈರಸ್ ತೀವ್ರ ಬಾಧಿತ ದೇಶಗಳ ಜನರಿಗೆ ಅವರು ಬೆಂಬಲ ನೀಡುವ ಅಗತ್ಯವಿದೆ ಎಂದು ಒತ್ತಿಹೇಳಿದೆ.

ಈಗ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಸರಿಪಡಿಸುವ ಕ್ರಮಗಳಿಂದ, ಬಿಕ್ಕಟ್ಟು ಉಳಿಸಿಹೋಗುವ ಕಹಿಯನ್ನು ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ವಸತಿ, ಆಹಾರ, ಉತ್ಪಾದನೆ, ಚಿಲ್ಲರೆ ವ್ಯಾಪಾರ, ವ್ಯವಹಾರ ಹಾಗೂ ಆಡಳಿತ ವಲಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿಶ್ವಾದ್ಯಂತ ಪ್ರತಿ ಐದು ಉದ್ಯೋಗಿಗಳಲ್ಲಿ ನಾಲ್ವರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.