Friday, 20th September 2024

ಸಣ್ಣ, ಅತಿ ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಂಪರ್

ನವದೆಹಲಿ :

ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 3 ಲಕ್ಷ ಕೋಟಿ ಜಾಮೀನು ರಹಿತ ಸಾಲ ನೀಡಲು ಕೇಂದ್ರ ಸರ್ಕಾರ ಮೀಸಲಿರಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಸಾಲ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ಸಾಲ ನೀಡಿದ ಮೊದಲ 12 ತಿಂಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ. ಬ್ಯಾಂಕಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ಕೇಂದ್ರ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಆರ್ಥಿಕತೆ, ನಿರ್ಮಾಣ, ವ್ಯವಸ್ಥೆ, ಜನಸಂಖ್ಯೆ ಹಾಗೂ ಬೇಡಿಕೆ ಇವು ಆತ್ಮ ನಿರ್ಭಾರ್ ಭಾರತದ ಐದು ಆಧಾರ ಸ್ತಂಭಗಳು ಎಂದು ವಿತ್ತ ಸಚಿವರು ಹೇಳಿದರು. ಹಾಗೆಯೇ ಆತ್ಮ ನಿರ್ಭಾರ್ (ಸ್ವಾವಲಂಬಿ) ಭಾರತ ಅಂದರೆ ಭಾರತವು ಪ್ರತ್ಯೇಕವಾಗಿ ಇರುವ ದೇಶ ಎಂದು ಅರ್ಥವಲ್ಲ ಎಂದು ಹೇಳಿದರು.

ಅಕ್ಟೋಬರ್ 31ರ ವರೆಗೆ ಸಣ್ಣ ಕೈಗಾರಿಕೆಗಳು ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಈ ಕಂಪನಿಗಳು ಪಡೆಯುವ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲಿದೆ. ಸಾಲ ಮರುಪಾವತಿಗೆ ನಾಲ್ಕು ವರ್ಷ ಕಾಲಾವಕಾಶ ನೀಡಲಾಗಿದ್ದು, ಒಂದು ವರ್ಷದವರಗೆ ಇಎಂಐ ವಿನಾಯಿತಿ ನೀಡಲಾಗುವುದು ಎಂದು ಸೀತಾರಾಮನ್ ತಿಳಿಸಿದರು.

ಈಗ ಸಂಕಷ್ಟದಲ್ಲಿರುವ ಎಂಎಸ್​ಎಂಇಗಳಿಗೆ 20 ಸಾವಿರ ಕೋಟಿ ರೂ ಸಾಲದ ವ್ಯವಸ್ಥೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಇದರಿಂದ 2 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.
ಇದೇ ವೇಳೆ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪುಷ್ಟಿ ನೀಡಲು ಹಣಕಾಸು ಸಚಿವರು ಮಹತ್ವದ ಸುಧಾರಣೆ ಘೋಷಿಸಿದರು.

ಸಣ್ಣ ಕೈಗಾರಿಕೆಗಳನ್ನು ಗುರುತಿಸುವ ವಿಧಾನದಲ್ಲಿ ಬದಲಾವಣೆ ತಂದಿದ್ದಾರೆ. ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಹೆಚ್ಚಿಸಿದ್ದಾರೆ. ಅದರಂತೆ ಸಣ್ಣ ಕೈಗಾರಿಕೆಗಳಲ್ಲಿ 1 ಕೋಟಿಯವರೆಗೆ ಬಂಡವಾಳ ಹೂಡಿಕೆ ಸಾಧ್ಯ. ಹಾಗೆಯೇ, 5 ಕೋಟಿಯವರೆಗೂ ವಹಿವಾಟು ಹೊಂದಬಹುದು.

ಸಣ್ಣ ಕೈಗಾರಿಕೆಗಳು ತಮ್ಮ ಹಣೆಪಟ್ಟಿ ಕಳಚಿಹೋಗುವ ಭೀತಿಯಿಂದ ಹೆಚ್ಚುವರಿ ಹೂಡಿಕೆಗೆ ನಿರಾಸಕ್ತಿ ತೋರುತ್ತಿದ್ದ ಹಿನ್ನೆಲೆಯಲ್ಲಿ ಉತ್ತೇಜನ ನೀಡಲು ಸಚಿವರು ಈ ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಿತಿಗಳನ್ನೂ ಹೆಚ್ಚಿಸಿದ್ದಾರೆ.

ಎಂಎಸ್​ಎಂಇಯಲ್ಲಿ ತಯಾರಿಕಾ ಕ್ಷೇತ್ರ ಮತ್ತು ಸೇವಾ ಕ್ಷೇತ್ರದ ವರ್ಗೀಕರಣ ಇತ್ತು. ಎರಡಕ್ಕೂ ವಿಭಿನ್ನ ಮಾನದಂಡಗಳನ್ನು ಅಳವಡಿಸಲಾಗಿತ್ತು. ಈಗ ಕೇಂದ್ರ ಸರ್ಕಾರವು ಈ ವರ್ಗೀಕರಣವನ್ನೇ ತೆಗೆದುಹಾಕಿದೆ. ಹಾಗೆಯೇ, ಅತಿಸಣ್ಣ ಕೈಗಾರಿಕೆಗಳ ಹೂಡಿಕೆ ಮಿತಿಯನ್ನು 1 ಕೋಟಿಗೆ ಹಾಗೂ ವಹಿವಾಟು ಮಿತಿಯನ್ನ 5 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಸಣ್ಣ ಕೈಗಾರಿಕೆಗಳ ಹೂಡಿಕೆ ಮಿತಿಯನ್ನು 5 ಕೋಟಿಗೆ ಹಾಗೂ ವಹಿವಾಟು ಮುತಿಯನ್ನು 50 ಕೋಟಿಗೆ ಹೆಚ್ಚಿಸಲಾಗಿದೆ. ಇನ್ನು, ಮಧ್ಯಮ ಕೈಗಾರಿಕೆಗಳ ಹೂಡಿಕೆ ಮಿತಿಯನ್ನು 20 ಕೋಟಿಗೆ ಹಾಗೂ ವಹಿವಾಟು ಮಿತಿಯನ್ನು 100 ಕೊಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

ಸಣ್ಣ ಕೈಗಾರಿಕೆಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಹಣ ಇಲ್ಲದಿದ್ದರೆ ಕೇಂದ್ರ ಸರ್ಕಾರ ನೆರವು ನೀಡುತ್ತದೆ. ಮೂರು ತಿಂಗಳವರೆಗೆ ಎಟಿಎಂಗಳಲ್ಲಿ ಹಣ ಪಡೆಯಲು ಯಾವುದೇ ಶುಲ್ಕ ಇಲ್ಲ. ಅಕ್ಟೋಬರ್ 31ರವರೆಗೆ ಕೈಗಾರಿಕೆಗು ಸಾಲ ಪಡೆಯಬಹುದು. ಸಂಕಷ್ಟದಲ್ಲಿ ಇರುವ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ರೂಪಾಯಿ ಸಹಾಯಕ ಸಾಲ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಉಚಿತ ಅಕ್ಕಿ :
ಮುಂದಿನ ಮೂರು ತಿಂಗಳುಗಳು ಭಾರತದಲ್ಲಿರುವ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿ ಉಚಿತ  ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ಈ ಯೋಜನೆಯಿಂದ ತುತ್ತು ಕೂಳಿಗೂ ಸಂಕಷ್ಟ ಪಡುತ್ತಿದ್ದ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ.

ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ಮೂಕ 2500 ಕೋಟಿ ನೆರವು ನೀಡಲಿದೆ. ಸಣ್ಣ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಗೃಹ ಸಾಲ ನೀಡುವ ಸಂಸ್ಥೆಗಳು ಹಾಗೂ ಸಣ್ಣ ಸಾಲ ನೀಡುವ ಸಂಸ್ಥೆಗಳು ಕೇಂದ್ರ ಸರ್ಕಾರ ನೆರವು ನೀಡಲಿದೆ. ಈ ವಲಯಕ್ಕೆ 30 ಸಾವಿರ ಕೋಟಿ ರೂ. ನೀಡಲಿದೆ.

200 ಕೋಟಿವರೆಗೆ ಜಾಗತಿಕ ಟೆಂಡರ್​ ಅಗತ್ಯವಿಲ್ಲ. ವಿದೇಶಿ ಕಂಪನಿಗಳು ಈ ಟೆಂಡರ್​ನಲ್ಲಿ ಭಾಗವಹಿಸುವಂತಿಲ್ಲ. ಇದರಿಂದ ನಮ್ಮ ದೇಶದ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಸಣ್ಣ ಕೈಗಾರಿಕೆಗಳಿಗೆ ಇ-ಮಾರ್ಕೆಟ್ ಮೂಲಕ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಲಾಗುವುದು. ಮುಂದಿನ 45 ದಿನಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಸರ್ಕಾರದ ವತಿಯಿಂದ ಉಳಿಸಿಕೊಂಡಿರುವ ಬಾಕಿ ವಾಪಸ್ ಕೊಡಲಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಕೊರೊನಾದಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿವೆ. 90 ಸಾವಿರ ಕೋಟಿ ರೂಪಾಯಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೊಸ ಆರ್ಥಿಕ ಪ್ಯಾಕೇಜ್ ಅನುಸಾರ ಮೀಸಲು ಇಡಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಿರುವ ಗ್ಯಾರಂಟಿ ಮೂಲಕ ಹಣ ಪಾವತಿ ಮಾಡಲಾಗುವುದು.

ಸರ್ಕಾರಗಳು ಉಳಿಸಿಕೊಂಡಿರುವ ಹಳೆಯ ಬಾಕಿ ಪಾವತಿಗೆ ಹಣ ಮೀಸಲು ಇಡಲಾಗಿದೆ. ಜೊತೆಗೆ ವಿದ್ಯುತ್​ ಸರಬರಾಜು ಕಂಪನಿಗಳು ವಿದ್ಯುತ್​ ಉತ್ಪಾದಿಸುವ ಕಂಪನಿಗಳಿಗೆ ನೀಡಿರುವ ಬಾಕಿ ಪಾವತಿಗೂ ಹಣಕಾಸು ನೀಡಲಾಗುವುದು.

ಕೇಂದ್ರದ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುವ ಕಂಪನಿಗಳಿಗೆ ಮಾತ್ರ ರಿಬೇಟ್ ಮಾದರಿಯಲ್ಲಿ ನೀಡಲಾಗುವುದು. ಇದರೊಂದಿಗೆ ವಿದ್ಯುತ್​ ಸರಬರಾಜು ಕಂಪನಿಗಳಿಗೆ ರೂ. 90 ಸಾವಿರ ಕೋಟಿ ಪ್ಯಾಕೇಜ್ ಘೋಷಣೆಯಾಗಿದೆ. ಇದರಿಂದ ವಿದ್ಯುತ್ ಸರಬರಾಜು, ಉತ್ಪಾದನಾ ಕಂಪನಿಗಳಿಗೆ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರದಡಿ ಬರುವ ಗುತ್ತಿಗೆದಾರರ ಗುತ್ತಿಗೆ ಅವಧಿಯನ್ನು 6 ತಿಂಗಳವರೆಗೆ, ಕಾಮಗಾರಿಗಳ ಪೂರ್ಣಗೊಳಿಸಲು ವಿಸ್ತರಿಸಲಾಗುವುದು. ಗುತ್ತಿಗೆದಾರರು ನೀಡಿರುವ ಬ್ಯಾಂಕ್​ ಗ್ಯಾರಂಟಿಯನ್ನು ಮರುಪಾವತಿ ಮಾಡಬೇಕು. ಹಂತಹಂತವಾಗಿ ನಿರ್ಮಾಣ ಕೆಲಸ ಮುಗಿಯುತ್ತಿದ್ದಂತೆ ಬ್ಯಾಂಕ್​ ಗ್ಯಾರಂಟಿ ವಾಪಸ್ ನೀಡಬೇಕು.

ರಿಯಲ್’ ಆರ್ಥಿಕ ಪ್ಯಾಕೇಜ್:
ರಿಯಲ್ ಎಸ್ಟೇಟ್​ ನಿಯಂತ್ರಣ ಪ್ರಾಧಿಕಾರಕ್ಕೆ ಅವಕಾಶ ನೀಡಲಾಗುವುದು. ಮಾ. 31ರಿಂದ 6 ತಿಂಗಳವರೆಗೆ ನೋಂದಣಿ ಅವಧಿ ವಿಸ್ತರಣೆ ಮಾಡಲಾಗುವುದು. ಇದು ಡೆವಲಪರ್ಸ್​, ರಿಯಲ್ ಎಸ್ಟೇಟ್​ ಇಂಡಸ್ಟ್ರಿಗೆ ಅನುಕೂಲವಾಗಿದೆ.

ಬಾಕಿ ಉಳಿದಿರುವ ಯೋಜನೆಗಳನ್ನು ಮುಗಿಸಲು ರಿಯಲ್ ಎಸ್ಟೇಟ್​ ಇಂಡಸ್ಟ್ರಿಗೆ 6 ತಿಂಗಳು ಕಾಲಾವಕಾಶ ನೀಡಲಾಗಿದೆ. ರೇರಾ ಅಡಿಯಲ್ಲಿ ನೋಂದಣಿಯಾಗಿರುವ ಕಂಪನಿಗಳಿಗೆ ಸದ್ಯಕ್ಕೆ ಕೇಂದ್ರದ ರಿಲೀಫ್​ ದೊರೆತಿದೆ. ಸದ್ಯಕ್ಕೆ ರಿಯಲ್​ ಎಸ್ಟೇಟ್ ಕಂಪನಿಗಳು ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.