Sunday, 15th December 2024

ಮೂರು ಅಂತಸ್ತಿನ ಕಟ್ಟಡ ಕುಸಿತ: 11 ಮಂದಿ ಸಾವು

ಮುಂಬೈ: ಮುಂಬೈಯ ಮಾಲ್ವನಿ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಸಿಲುಕಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 8 ಮಂದಿ ಮಕ್ಕಳು ಮತ್ತು ಮೂವರು ವಯಸ್ಕರು ಸೇರಿದ್ದಾರೆ.

ದುರ್ಘಟನೆಯಲ್ಲಿ 7 ಮಂದಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ಮಾಲ್ವನಿ ಪ್ರದೇಶದ ಅಬ್ದುಲ್ ಹಮೀದ್ ರಸ್ತೆಯ ನ್ಯೂ ಕಲೆಕ್ಟರ್ ಕಂಪೌಂಡ್ ನಲ್ಲಿ ದುರ್ಘಟನೆ ಸಂಭವಿಸಿದೆ.

ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ರಕ್ಷಣಾ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿತು. ಕಟ್ಟಡ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ನೆಲಮಹಡಿ ಸೇರಿದಂತೆ ಮೂರು ಮಹಡಿಗಳಿರುವ ಕಟ್ಟಡ ಮತ್ತೊಂದು ಕಟ್ಟಡದ ಮೇಲೆ ಕುಸಿದುಬಿದ್ದಿದೆ. ಕಾರ್ಯಾಚರಣೆ ಯಲ್ಲಿ ಇದುವರೆಗೆ 18 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿ ಮೃತಪಟ್ಟಿದ್ದಾರೆ. ಕಟ್ಟಡ ಕುಸಿದು ಬಿದ್ದ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದಿಲೀಪ್ ಸಾವಂತ್ ತಿಳಿಸಿದ್ದಾರೆ.