ನವದೆಹಲಿ: ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರಕಾರವು 2014 ರಿಂದ ಭಾರತದಲ್ಲಿ 157 ಹೊಸ ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಿದೆ ಮತ್ತು ಈ ಯೋಜನೆಗಳಿಗೆ 17,691.08 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸುಮಾರು 16,000 ಪದವಿಪೂರ್ವ ವೈದ್ಯಕೀಯ ಸೀಟುಗಳನ್ನು ಸೇರಿಸಲಾಗುವುದು ಎಂದು ಹೇಳಿದೆ. 6,500 ಸೀಟುಗಳನ್ನು ಈಗಾಗಲೇ 64 ಹೊಸ ವೈದ್ಯಕೀಯ ಕಾಲೇಜುಗಳ ಕಾರ್ಯನಿರ್ವಹಣೆಯೊಂದಿಗೆ ರಚಿಸಲಾಗಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ, ದೇಶದಲ್ಲಿ ಎಂಬಿಬಿಎಸ್ ಸೀಟು ಗಳನ್ನು ಹೆಚ್ಚಿಸಲು ಅಸ್ತಿತ್ವದಲ್ಲಿರುವ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಉನ್ನತೀಕರಣಕ್ಕಾಗಿ ಕೇಂದ್ರ ಸರ್ಕಾರವು ಸುಮಾರು 2,451.1 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಕಡಿಮೆ/ಹಿಂದುಳಿದ/ಮಹತ್ವಾ ಕಾಂಕ್ಷೆಯ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುತ್ತದೆ. ಯೋಜನೆಯ ಮೂರು ಹಂತಗಳ ಅಡಿಯಲ್ಲಿ, 157 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. 63 ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.
ದೇಶದ ಸರ್ಕಾರಿ ಕಾಲೇಜುಗಳಲ್ಲಿ 10,000 ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಉದ್ದೇಶದಿಂದ, ಆರೋಗ್ಯ ಸಚಿವಾಲಯವು ಎಂಬಿಬಿಎಸ್ ಸೀಟು ಗಳನ್ನು ಹೆಚ್ಚಿಸಲು ಅಸ್ತಿತ್ವದಲ್ಲಿರುವ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಉನ್ನತೀಕರಣಕ್ಕಾಗಿ ಸಿಎಸ್ಎಸ್ ಅನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದೆ.