Saturday, 23rd November 2024

ಪೈಲೆಟ್‌ ಸಮಯ ಪ್ರಜ್ಞೆ: 185 ಪ್ರಯಾಣಿಕರು ಪಾರು

ಪಾಟ್ನಾ: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದ ಹಿನ್ನೆಲೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ಪೈಲೆಟ್‌ ಸಮಯ ಪ್ರಜ್ಞೆಯಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಬೋಯಿಂಗ್ 737 ಪೈಲಟ್ ಕ್ಯಾಪ್ಟನ್ ಮೋನಿಕಾ ಖನ್ನಾ ಅವರ ಸಮಯಪ್ರಜ್ಞೆ ಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸುಮಾರು 185 ಪ್ರಯಾಣಿಕರ ಜೀವ ಉಳಿದ ಘಟನೆ ನಡೆದಿದೆ.

ಪಾಟ್ನಾದಿಂದ ದೆಹಲಿಗೆ ತೆರಳುವ ಸ್ಪೈಸ್ ಜೆಟ್ ಪಾಟ್ನಾದಿಂದ ಟೇಕ್‌ಆಫ್‌ ಆಗಿತ್ತು. ಕೆಲವೇ ನಿಮಿಷಗಳಲ್ಲಿ ವಿಮಾನದ ಇಂಜಿನ್‌ ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಪೈಲಟ್ ಗಮನಕ್ಕೆ ಬಂದಿದೆ. ತುರ್ತು ಭೂ ಸ್ಪರ್ಶದ ಮೂಲಕ ನೂರಾರು ಪ್ರಯಾಣಿಕರ ಜೀವ ರಕ್ಷಣೆಗೆ ಕಾರಣರಾದ ಪೈಲಟ್ ಮೋನಿಕಾ ಖನ್ನಾ ಕಾರ್ಯವನ್ನು ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಇದರಿಂದ ಸಂಭವನೀಯ ಬೃಹತ್ ಅವಘಡವೊಂದು ತಪ್ಪಿದೆ. ಪ್ರಯಾಣಿಕರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅವರೆಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಏರ್‌ಪೋರ್ಟ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.