Monday, 11th November 2024

2008ರ ಸರಣಿ ಬಾಂಬ್‌ ಸ್ಫೋಟ ಪ್ರಕರಣ: 49 ತಪ್ಪಿತಸ್ಥರು, 28 ಮಂದಿ ಖುಲಾಸೆ

ಅಹಮದಾಬಾದ್: ಸರಣಿ ಬಾಂಬ್‌ ಸ್ಫೋಟ ಪ್ರಕರಣ(2008)ದಲ್ಲಿ ವಿಶೇಷ ನ್ಯಾಯಾಲಯ ಮಂಗಳ ವಾರ ತನ್ನ ತೀರ್ಪು ನೀಡಿದೆ. ಸುದೀರ್ಘ 13 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ 49 ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ಕಂಡುಕೊಂಡಿದೆ.

ಸ್ಫೋಟದಲ್ಲಿ  56 ಮಂದಿ ಮೃತಪಟ್ಟು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇತರ 28 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ 77 ಮಂದಿ ವಿಚಾರಣೆ ಎದುರಿಸಿ ದ್ದರು. ಬುಧವಾರ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಪ್ರಕರಣದ ವಿಚಾರಣೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ವಿಶೇಷ ನ್ಯಾಯಾಧೀಶ ಎ. ಆರ್. ಪಟೇಲ್ ಗುಜರಾತ್‌ನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ತೀರ್ಪು ನೀಡಿದ್ದಾರೆ.

2008 ರಲ್ಲಿ, ಸರಣಿ ಸ್ಫೋಟಗಳ ನಂತರ, ಗುಜರಾತ್ ಪೊಲೀಸರು ಸ್ಫೋಟಗಳನ್ನು ನಡೆಸಿದ ಆರೋಪದ ಮೇಲೆ ರಾಷ್ಟ್ರಾದ್ಯಂತ ಹಲವು ಆರೋಪಿ ಗಳನ್ನು ಬಂಧಿಸಿದ್ದರು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ನಂತರದ ದಂಗೆಗಳಿಗೆ ಪ್ರತೀಕಾರ ವಾಗಿ ಐಎಂ ಭಯೋತ್ಪಾದಕರು ಸ್ಫೋಟಗಳನ್ನು ಯೋಜಿಸಿ ಕಾರ್ಯಗತ ಗೊಳಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

35 ವಿವಿಧ ಪ್ರಕರಣಗಳನ್ನು ವಿಲೀನಗೊಳಿಸಿ ಒಂದು ಪ್ರಕರಣವಾಗಿ ಕ್ರೋಢೀಕರಿಸಿದ ನಂತರ ವಿಚಾರಣೆ ಪ್ರಾರಂಭವಾಯಿತು. ಹಲವು ತಿರುವುಗಳನ್ನು ಕಂಡ ವಿಚಾರಣೆಯಲ್ಲಿ, ಸ್ಫೋಟದ ಒಂದು ವರ್ಷದ ನಂತರ, 2009 ರಲ್ಲಿ ವಿಚಾರಣೆ ಪ್ರಾರಂಭಿಸಿದ ವಿಶೇಷ ನ್ಯಾಯಾಧೀಶ ಪಟೇಲ್ ಅವರ ಮುಂದೆ ಪ್ರಾಸಿಕ್ಯೂಷನ್ 1,100 ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರೀಕ್ಷಿಸಿತು.

ಸೂಕ್ಷ್ಮ ಪ್ರಕರಣದ ವಿಚಾರಣೆ ಆರಂಭದಲ್ಲಿ ಭದ್ರತಾ ಕಾರಣಗಳಿಗಾಗಿ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ನಡೆಯಿತು. ನಂತರ ಪ್ರಕ್ರಿಯೆಗಳನ್ನು ಹೆಚ್ಚಾಗಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಯಿತು.