ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುವ ಕಾರ್ಯ ಭರದಿಂದ ಸಾಗಿದ್ದು, ಭಾನುವಾರ 210 ಭಾರತೀಯ ರನ್ನು ಸ್ವದೇಶಕ್ಕೆ ಕರೆತರಲಾಗಿದೆ.
ಬುಚಾರೆಸ್ಟ್ ನಿಂದ 210 ಭಾರತೀಯರನ್ನು ಕರೆತಂದ ಭಾರತೀಯ ವಾಯುಪಡೆಯ ವಿಮಾನ ದೆಹಲಿ ಬಳಿಯ ಹಿಂದನ್ ವಾಯುನೆಲೆಗೆ ಆಗಮಿಸಿತು.
ಒಟ್ಟು 11 ವಿಶೇಷ ವಿಮಾನಗಳು ಬುಡಾಪೆಸ್ಟ್, ಕೊಸೈಸ್, ರ್ಜೆಸ್ಜೋವ್ ಮತ್ತು ಬುಕಾರೆಸ್ಟ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
‘ಆಪರೇಷನ್ ಗಂಗಾ’ ಅಡಿಯಲ್ಲಿ ಉಕ್ರೇನ್‌ನ ನೆರೆಯ ದೇಶಗಳಿಂದ 15 ವಿಶೇಷ ವಿಮಾನಗಳ ಮೂಲಕ ಸುಮಾರು 3,000 ಭಾರತೀಯರನ್ನು ಶನಿವಾರ ಸ್ವದೇಶಕ್ಕೆ ಕರೆತರಲಾಗಿದೆ. ಈ 15 ವಿಶೇಷ ವಿಮಾನ ಗಳಲ್ಲಿ 12 ವಿಶೇಷ ನಾಗರಿಕ ಮತ್ತು 3 ಭಾರತೀಯ ವಾಯುಪಡೆಯ ವಿಮಾನಗಳು ಸೇರಿವೆ.
ಇದೇ ತಿಂಗಳಿನಿಂದ 22ರಿಂದ ಇಲ್ಲಿಯವರೆಗೂ 13,700ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಆಪರೇಷನ್ ಗಂಗಾ ಭಾಗವಾಗಿ ಈ ರಾಷ್ಟ್ರಗಳಿಗೆ 26 ಟನ್ ಪರಿಹಾರ ಸಾಮಾಗ್ರಿ ಪೂರೈಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.