ನವದೆಹಲಿ: ಉಕ್ರೇನ್‌ನಿಂದ ಭಾರತಕ್ಕೆ ವಿದ್ಯಾರ್ಥಿಗಳು ಸೇರಿದಂತೆ 241 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಶೇಷ ವಿಮಾನ ದೆಹಲಿಗೆ ಬಂದಿಳಿದಿದೆ.
ವೈದ್ಯಕೀಯ ವಿದ್ಯಾರ್ಥಿ ಅನಿಲ್ ರಪ್ರಿಯಾ ಮಾತನಾಡಿ, ಉಕ್ರೇನ್ನಲ್ಲಿ ಸದ್ಯಕ್ಕೆ ಗಂಭೀರ ಪರಿಸ್ಥಿತಿ ಇಲ್ಲ. ಯುದ್ಧ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಯಿಂದಾಗಿ ಭಾರತೀಯ ರಾಯಭಾರಿ ಕಚೇರಿಯ ನಿರ್ದೇಶನದ ಮೇರೆಗೆ ನಾವು ಭಾರತಕ್ಕೆ ವಾಪಸ್ ಬಂದಿದ್ದೇವೆ ಎಂದರು. ಉಕ್ರೇನ್ನಲ್ಲಿ ಸಾಮಾನ್ಯ ಸ್ಥಿತಿ ಇದ್ದರೂ ನಾವು ಅಲ್ಲಿರುವುದು ಉತ್ತಮವಲ್ಲ ಎಂದು ನಮ್ಮ ಪೋಷಕರು ತಿಳಿಸಿದ್ದರು. ಹೀಗಾಗಿ ಭಾರತಕ್ಕೆ ವಾಪಸ್ ಆಗಿದ್ದೇವೆ ಎಂದು ದೆಹಲಿಯ ವಿದ್ಯಾರ್ಥಿಯೊಬ್ಬರು ತಿಳಿಸಿದರು.
ಭಾರತೀಯ ಪ್ರಜೆಗಳನ್ನು ಕರೆತರಲು ಕೇಂದ್ರ ಸರ್ಕಾರ ಏರ್ ಇಂಡಿಯಾದ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಉಕ್ರೇನ್ನಲ್ಲಿ ಅಸಾಧಾರಣ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ದೇಶ ತೊರೆಯು ವಂತೆ ಭಾರತೀಯ ರಾಯಭಾರಿ ಕಚೇರಿ ಭಾರತೀಯರನ್ನು ಕೇಳಿಕೊಂಡಿತ್ತು. ಅದರಂತೆ ವಿದ್ಯಾರ್ಥಿ ಗಳು ಸೇರಿದಂತೆ ಹಲವಾರು ನಾಗರಿಕರು ಭಾರತಕ್ಕೆ ಬಂದಿಳಿದಿದ್ದಾರೆ. ಉಕ್ರೇನ್-ರಷ್ಯಾ ಗಡಿಯಲ್ಲಿ ದಿನೇದಿನೆ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಭಾರತ ಇಂದು ತೀವ್ರ ಆತಂಕ ವ್ಯಕ್ತಪಡಿಸಿದೆ.
ಪೂರ್ವ ಉಕ್ರೇನ್ನಲ್ಲಿ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಪ್ರದೇಶಗಳ ಸ್ವಾತಂತ್ರ್ಯವನ್ನು ರಷ್ಯಾ ಮಾನ್ಯ ಮಾಡುವು ದಾಗಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಬಹಿರಂಗವಾಗಿ ಘೋಷಿಸಿದ ಬಳಿಕ, ಉಕ್ರೇನ್, ಯುಎಸ್ ಮತ್ತು ಯುಕೆ ಜತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಅಧಿವೇಶನ ನಡೆಸಿತು.
ಉಕ್ರೇನ್ನಲ್ಲಿರುವ ಭಾರತೀಯರನ್ನು ವಾಪಸ್ ದೇಶಕ್ಕೆ ಕರೆತರಲು ವಿಮಾನ ಹೊರಡಲಿದ್ದು, ಮತ್ತೊಂದು ವಿಮಾನ ಗುರುವಾರ ಹಾಗೂ ಮೂರನೇ ವಿಮಾನ ಶನಿವಾರ ಹೊರಡಲಿದೆ ಎಂದು ಹೇಳಲಾಗಿದೆ.