ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‍ಪಿಜಿ ಸಿಲಿಂಡರುಗಳ ಬೆಲೆಯನ್ನು ಇಂದಿನಿಂದಲೇ ಜಾರಿಯಾಗುವಂತೆ 25 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯೊಂದಿಗೆ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರಿನ ಚಿಲ್ಲರೆ ಬೆಲೆ 1,795 ರೂ. ಆಗಿದೆ.
ಮುಂಬೈನಲ್ಲಿ ಇಂದಿನಿಂದ 19 ಕೆಜಿ ಸಿಲಿಂಡರ್ 1,749 ರೂ.ಗೆ ಮಾರಾಟವಾಗಲಿದೆ.
ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆ ಕ್ರಮವಾಗಿ 1,960 ರೂ, ಮತ್ತು 1,911 ರೂ.ಗೆ ಏರಿಕೆಯಾಗಿದೆ. ಫೆಬ್ರವರಿ 1 ರಂದು 19 ಕೆಜಿ ಗ್ಯಾಸ್ ಸಿಲಿಂಡರ್ ದರ 14 ರೂ. ಹೆಚ್ಚಾಗಿತ್ತು.
ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 23.50 ರೂ. ಹೆಚ್ಚಾಗಿ 1,875 ರೂ. ಆಗಿದೆ. ಕಳೆದ ಎರಡು ತಿಂಗಳ ದರ ಪರಿಷ್ಕರಣೆ ಬಗ್ಗೆ ಗಮನಿ ಸುವುದಾದರೆ, ಕೋಲ್ಕತಾದಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ. ಕೋಲ್ಕತ್ತಾದಲ್ಲಿ ಎರಡು ತಿಂಗಳ ಅವಧಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 42 ರೂಪಾಯಿ ಏರಿಕೆಯಾಗಿದೆ. ಆ ನಂತರ ಮುಂಬೈನಲ್ಲಿ 40.5 ರೂ. ಏರಿಕೆಯಾಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಈ ಏರಿಕೆ 39.5 ರೂ. ಆಗಿದೆ. ದಕ್ಷಿಣ ಭಾರತದ ಅತಿದೊಡ್ಡ ಮಹಾನಗರ ಚೆನ್ನೈಯಲ್ಲಿ ಎರಡು ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕನಿಷ್ಠ 36 ರೂ. ಏರಿಕೆಯಾಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‍ಗಳ ಬೆಲೆ ಪರಿಷ್ಕರಣೆಯನ್ನು ಕಳೆದ 6 ತಿಂಗಳುಗಳಿಂದ ಸ್ಥಗಿತಗೊಳಿಸ ಲಾಗಿದೆ.
ಆಗಸ್ಟ್ 30 ರಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆ ಸಮಯದಲ್ಲಿ ಕೇಂದ್ರ ಸರ್ಕಾರವು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿತ್ತು. ಆ ನಂತರ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 903 ರೂ.ಗೆ ಮತ್ತು ಕೋಲ್ಕತ್ತಾದಲ್ಲಿ 929 ರೂ.ಗೆ ಇಳಿದಿತ್ತು.