Sunday, 22nd September 2024

Modi visit to USA : ಅಮೆರಿಕ ಭೇಟಿಯಲ್ಲಿ ಭಾರತಕ್ಕೆ ಸೇರಿದ ಪ್ರಾಚೀನ ವಸ್ತುಗಳನ್ನು ವಾಪಸ್ ಪಡೆದ ಮೋದಿ

PM modi

ಬೆಂಗಳೂರು: ಕಳ್ಳಸಾಗಣೆ ಸೇರಿದಂತೆ ನಾನಾ ರೂಪದಲ್ಲಿ ಅಮೆರಿಕದ ವಶದಲ್ಲಿದ್ದ ಭಾರತಕ್ಕೆ ಸೇರಿದ ಪ್ರಾಚೀನ ಕಾಲದ ವಸ್ತುಗಳನ್ನು ಪ್ರಧಾನಿ ಮೋದಿ ತಮ್ಮ ಅಮೆರಿಕ ಅಧಿಕೃತ ಭೇಟಿಯಲ್ಲಿ (Modi visit to USA) ವಾಪಸ್ ಪಡೆದುಕೊಂಡಿದ್ದಾರೆ. ಅಮೆರಿಕವು ಭಾರತಕ್ಕೆ ಸೇರಿದ 297 ಪ್ರಾಚೀನ ವಸ್ತುಗಳನ್ನು ಹಸ್ತಾಂತರಿಸಿದೆ. ಈ ಎಲ್ಲ ಪ್ರಾಚೀನ ವಸ್ತುಗಳನ್ನು ದೇಶದಿಂದ ಕಳ್ಳಸಾಗಣೆ ಮಾಡಲಾಗಿತ್ತು ಮತ್ತು ಅಮೆರಿಕದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಸಾಂಸ್ಕೃತಿಕ ಆಸ್ತಿಯ ಕಳ್ಳಸಾಗಣೆ ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದ ದೀರ್ಘಕಾಲದ ಸಮಸ್ಯೆಯಾಗಿದೆ, ಮತ್ತು ಭಾರತವು ವಿಶೇಷವಾಗಿ ಹಾನಿಗೊಳಗಾಗಿದೆ. ಪ್ರಧಾನಿ ಮೋದಿ ಅವುಗಳನ್ನು ಒಂದೊಂದಾಗಿ ವಾಪಸ್ ತರುತ್ತಿದೆ.

ಸಾಂಸ್ಕೃತಿಕ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಪ್ರಾಚೀನ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟ ಬಲಪಡಿಸಿದ್ದಕ್ಕೆ ಮತ್ತು 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಮರಳಿಸಿದಿ ಅಧ್ಯಕ್ಷ ಬೈಡನ್ ಮತ್ತು ಯುಎಸ್ ಸರ್ಕಾರಕ್ಕೆ ತುಂಬಾ ಕೃತಜ್ಞನಾಗಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ವಸ್ತುಗಳು ಕೇವಲ ಭಾರತದ ಐತಿಹಾಸಿಕ ಭೌತಿಕ ಸಂಸ್ಕೃತಿಯ ಭಾಗವಲ್ಲ. ಅದು ನಾಗರಿಕತೆ ಪ್ರಜ್ಞೆಯ ಆಂತರಿಕ ತಿರುಳಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Anura Kumara Dissanayake : ಮಾರ್ಕ್ಸ್‌ವಾದಿ ದಿಸ್ಸಾನಾಯಕೆ ಶ್ರೀಲಂಕಾದ ನೂತನ ಅಧ್ಯಕ್ಷ

ಇದರೊಂದಿಗೆ 2014 ರಿಂದ ಭಾರತವು ವಶಪಡಿಸಿಕೊಂಡ ಒಟ್ಟು ಪ್ರಾಚೀನ ವಸ್ತುಗಳ ಸಂಖ್ಯೆ 640 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತಕ್ಕೆ ಹಸ್ತಾಂತರಿಸಲಾದ ಕೆಲವು ಗಮನಾರ್ಹ ಪ್ರಾಚೀನ ವಸ್ತುಗಳಲ್ಲಿ ಕ್ರಿ.ಶ 10-11 ನೇ ಶತಮಾನಕ್ಕೆ ಸೇರಿದ ಮಧ್ಯ ಭಾರತದ ಮರಳುಗಲ್ಲಿನ ‘ಅಪ್ಸರೆ’, ಕ್ರಿ.ಶ 15-16 ನೇ ಶತಮಾನಕ್ಕೆ ಸೇರಿದ ಕಂಚಿನ ಜೈನ ತೀರ್ಥಂಕರ, ಕ್ರಿ.ಶ 3-4 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಟೆರಾಕೋಟಾ ಹೂದಾನಿ ಮತ್ತು ಕ್ರಿ.ಪೂ 1 ರಿಂದ 1 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ ಸೇರಿವೆ.