ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಗೆ ಗುರುವಾರ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ.
ಸಿಎಂ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಸ್ಪರ್ಧಿಸಿರುವ ನಂದಿಗ್ರಾಮ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ.
2016ರ ಚುನಾವಣೆಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಬೆನ್ನೆಲುಬಾಗಿ ನಿಂತು ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಸುವೇಂದು ಅಧಿಕಾರಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವದ ವಿರುದ್ಧ ಬಂಡೆದ್ದು, ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು.
ಬಿಜೆಪಿಯಿಂದ ನಂದಿಗ್ರಾಮ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು, ಕಮಲ ಅರಳಿಸುವ ಪಣ ತೊಟ್ಟಿದ್ದಾರೆ. ತಮ್ಮ ಮಾಜಿ ನಾಯಕಿಗೆ ದೊಡ್ಡ ಸವಾಲಾಗಿದ್ದಾರೆ. ಟಿಎಂಸಿ ಭದ್ರಕೋಟೆಯಾಗಿದ್ದ ನಂದಿಗ್ರಾಮದಲ್ಲಿ ಬಿಜೆಪಿ ಪರ್ವ ಆರಂಭಿಸುವ ಸವಾಲು ಹಾಕಿದ್ದಾರೆ.
ನಂದಿಗ್ರಾಮದ ಮನೆ ಮಗನಂತಿರುವ ಸುವೇಂದು ಅಧಿಕಾರಿ, ಮಮತಾ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಒಂದೊಮ್ಮೆ, ಮಮತಾ ಅವರು ಸುವೇಂದು ಅವರನ್ನು ಸೋಲಿಸಿದರೆ, ಬಿಜೆಪಿಯಲ್ಲಿ ಅಧಿಕಾರಿಯ ಸ್ಥಾನಮಾನದ ಬಗ್ಗೆ ಪ್ರಶ್ನೆ ಏಳಲಿದೆ. ಮಮತಾ ಸೋತರೆ, ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ದೊಡ್ಡ ಅಗ್ನಿಪರೀಕ್ಷೆ ಗೆದ್ದಂತಾಗುತ್ತದೆ.
ಪೂರ್ವ ಮೇದಿನಿಪುರ ಜಿಲ್ಲೆಯ ಚಂಡಿಪುರ ಕ್ಷೇತ್ರದಿಂದ ಬಂಗಾಳಿ ಚಲನಚಿತ್ರ ತಾರೆ ಸೋಹಮ್ ಚಕ್ರವರ್ತಿಯನ್ನು ಟಿಎಂಸಿ ಕಣಕ್ಕಿಳಿಸಿದೆ.
ನಟ ಸಯಂತಿಕಾ ಬಂಡೋಪಾಧ್ಯಾಯ ಬಂಕುರಾ ಜಿಲ್ಲೆಯ ಬಂಕುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯ ಪದಾರ್ಪಣೆ ಮಾಡಿದ್ಧರೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಅವರು ಪೂರ್ವ ಮೇದಿನಿಪುರ ಜಿಲ್ಲೆಯ ಮೊಯ್ನಾದಿಂದ ಕಣಕ್ಕಿಳಿದಿದ್ದಾರೆ.