Friday, 22nd November 2024

Pralhad Joshi: ಗುಜರಾತ್‌ನ ಗಾಂಧಿನಗರದಲ್ಲಿ ಸೆ.16ರಿಂದ ಮೂರು ದಿನ ಜಾಗತಿಕ ಹೂಡಿಕೆ ಸಮಾವೇಶ, ಎಕ್ಸ್‌ಪೊ

pralhad joshi

ನವದೆಹಲಿ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಗುಜರಾತ್‌ನಲ್ಲಿ ಸೆ.16ರಿಂದ ಮೂರು ದಿನ 4ನೇ ಜಾಗತಿಕ ಹೂಡಿಕೆ ಸಮಾವೇಶ ಮತ್ತು Re invest expo ಆಯೋಜಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವರು, ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪಾಲುದಾರಿಕೆಯೊಂದಿಗೆ ಸೆ.16,17 ಮತ್ತು 18ರಂದು ಈ ಮಹತ್ವದ ಇವೆಂಟ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಚಾಲನೆ

ಈ 4ನೇ ಜಾಗತಿಕ ಹೂಡಿಕೆ ಸಮಾವೇಶ ಮತ್ತು EXPO ವನ್ನು ಸೆ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Vande Bharat Train: ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು; ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಗಿಫ್ಟ್!

ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ನಾರ್ವೆ 4ನೇ ಮರು ಹೂಡಿಕೆಗೆ ಪಾಲುದಾರ ರಾಷ್ಟ್ರಗಳಾಗಿವೆ. ಅಂತೆಯೇ ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಈವೆಂಟ್‌ನ ಪಾಲುದಾರ ರಾಜ್ಯಗಳಾಗಿವೆ ಎಂದು ಸಚಿವರು ವಿವರಿಸಿದರು.

ಈ ಸಮಾವೇಶದಲ್ಲಿ ಪ್ರಮುಖ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ನವೀಕರಿಸಬಹುದಾದ ಇಂಧನ ವಲಯದಲ್ಲಿ ತಮ್ಮ ಪ್ರಸ್ತಾವಿತ ಸಾಲಗಳು/ನಿಧಿಯ ಬಗ್ಗೆ ಶಪತ್ ಪತ್ರವನ್ನು ನೀಡುತ್ತವೆ. ಅಲ್ಲದೇ, ಡೆವಲಪರ್‌ಗಳು, ತಯಾರಕರು, ಖಾಸಗಿ ಈಕ್ವಿಟಿ ಹೂಡಿಕೆದಾರರು, ಉನ್ನತ ಮಾರಾಟಗಾರರು ಸಹ ಶಪತ್‌ಪತ್ರವನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ನಾರ್ವೆ, ಸಿಂಗಾಪುರ್, ಹಾಂಗ್‌ಕಾಂಗ್, ಯುಎಸ್‌ಎ, ಯುಕೆ, ಬೆಲ್ಜಿಯಂ, ಯುರೋಪಿಯನ್ ಯೂನಿಯನ್, ಓಮನ್, ಯುಎಇ ಸೇರಿದಂತೆ ಅನೇಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಸಮ್ಮೇಳನದಲ್ಲಿ 10,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಮುಖ್ಯಮಂತ್ರಿಗಳ ಪೂರ್ಣ ಸಭೆ, ಸಿಇಒ ರೌಂಡ್‌ಟೇಬಲ್ ಮತ್ತು ಹಲವಾರು ರಾಜ್ಯ, ದೇಶ ಮತ್ತು ತಾಂತ್ರಿಕವಾಗಿ 44 ಅಧಿವೇಶನಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಸ್ಟಾರ್ಟ್ ಅಪ್‌ಗಳ ವಿಶೇಷ ಆಕರ್ಷಣೆ

ಹಸಿರು ಇಂಧನ ಶಕ್ತಿ ಪರಿವರ್ತನೆ ವೇಗಗೊಳಿಸುವಲ್ಲಿ ಮಹಿಳೆಯರು ನಾಯಕರಾಗಿ: ಸವಾಲುಗಳು ಮತ್ತು ಅವಕಾಶಗಳು ಹಾಗೂ 10 ಸೋಲಾರ್ ಎಕ್ಸ್ ಚಾಲೆಂಜ್ ಇಂಡಿಯಾ ವಿಜೇತರು ಹೂಡಿಕೆಗಾಗಿ ಆಯ್ಕೆ ಮಾಡುವ ಸ್ಟಾರ್ಟ್-ಅಪ್‌ಗಳ ಕುರಿತು ವಿಶೇಷ ಅಧಿವೇಶನವು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.

ಜಾಗತಿಕವಾಗಿ ಭಾರತಕ್ಕೆ 4ನೇ ಸ್ಥಾನ

ಭಾರತವು ಮುಂದಿನ ಪೀಳಿಗೆಗೆ ಹಸಿರು ಇಂಧನದ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಪ್ರಾಮುಖ್ಯತೆ ಹೊಂದಿದ್ದು, 2030ರ ವೇಳೆಗೆ ಭಾರತ 500 GW ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯ ಸಾಧಿಸುವ ಹಾದಿಯಲ್ಲಿದೆ. ವಿಶ್ವದ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಎಂದು ಸಚಿವ ಜೋಶಿ ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | HD Kumaraswamy: ಕೇಂದ್ರ ಸರ್ಕಾರದಿಂದ ಆಟೊ ಉದ್ದಿಮೆಗೆ ಉತ್ತೇಜನ; ಉದ್ಯೋಗವಕಾಶ ಹೆಚ್ಚಳ ನಿರೀಕ್ಷೆ

RE-INVEST 2024 ಉತ್ಪಾದನೆ ಮತ್ತು ನಿಯೋಜನೆ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಮಹತ್ವದ ಸಾಧನೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ ಎಂದು ಇದೇ ವೇಳೆ ತಿಳಿಸಿದರು.