Sunday, 15th December 2024

ದೇವಸ್ಥಾನದಲ್ಲಿ ಕಾಲ್ತುಳಿತ: ಮೂವರ ಸಾವು

ಬಿಕಾನೆರ್‌: ರಾಜಸ್ಥಾನದ ಸಿಕಾರ್‌ನಲ ಖಟು ಶ್ಯಾಮ್ ಜಿ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಭಗವಾನ್ ಕೃಷ್ಣನ ಅವತಾರವೆಂದು ನಂಬಲಾದ ಖಟು ಶ್ಯಾಮ್ ಜಿಯ ದರ್ಶನಕ್ಕೆ ಇಂದು ವಿಶೇಷ ದಿನವಾಗಿದ್ದ ಹಿನ್ನೆಲೆಯಲ್ಲಿ ಭಕ್ತಸಾಗರವೇ ದೇವಳಕ್ಕೆ ದೌಡಾಯಿಸಿತ್ತು. ದೇವಸ್ಥಾನದ ಗೇಟ್‌ಗಳು ತೆರೆಯುತ್ತಿದ್ದಂತೆ ಭಕ್ತರು ಒಳಗೆ ನುಗ್ಗಿದ್ದು, ಈ ಸಂದರ್ಭ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದರು, ಈ ವೇಳೆ ಆಕೆಯ ಹಿಂದೆ ಇದ್ದವರು ಕೂಡ ಬಿದ್ದಿದ್ದಾರೆ.

ಕಾಲ್ತುಳಿತಕ್ಕೆ ಸಿಕ್ಕಿ ಮೂವರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರೆ ಇಬ್ಬರು ಗಾಯಗೊಂಡರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.