Sunday, 15th December 2024

ಅಟಲ್ ರೊಹ್ಟಾಂಗ್ ಸುರಂಗ ಬಳಿ ಹಿಮಪಾತ: 300 ಪ್ರವಾಸಿಗರ ರಕ್ಷಣೆ

ಶಿಮ್ಲಾ: ಹಿಮಾಚಲ ಪ್ರದೇಶದ ಅಟಲ್ ರೊಹ್ಟಾಂಗ್ ಸುರಂಗ ಮಾರ್ಗದ ಬಳಿ ಹಿಮಪಾತ ಉಂಟಾಗಿ, ಇದರಡಿ ಸಿಲುಕಿದ್ದ ಸುಮಾರು 300 ಪ್ರವಾಸಿಗರನ್ನ ಪೊಲೀಸರು ರಕ್ಷಿಸಿದ್ದಾರೆ.

ಶನಿವಾರ ಸುರಂಗ ಮಾರ್ಗದ ಮೂಲಕ ಕೆಲ ಪ್ರವಾಸಿಗರು ಪ್ರಯಾಣ ನಡೆಸಿದ್ದರು. ಮನಾಲಿ, ಕುಲು ಪ್ರದೇಶಕ್ಕೆ ತೆರಳಬೇಕಿದ್ದ ಪ್ರವಾಸಿಗರು ಹಿಮಪಾತದಿಂದ ದಾರಿ ಕಾಣದೆ ಪರದಾಡುವಂತಾಗಿದೆ. ಕುಲು ಪೊಲೀಸರ ಸಹಕಾರದೊಂದಿಗೆ ಲಹಾವುಲ್-ಸ್ಪಿಟಿ ಪೊಲೀಸರು, ವಾಹನ ಕಳುಹಿಸಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಶನಿವಾರ ಸಂಜೆ ಆರಂಭವಾಗಿ, ಮಧ್ಯರಾತ್ರಿಯವರೆಗೂ ಮುಂದುವರೆದಿತ್ತು ಎಂದು ಕುಲು ಎಸ್.ಪಿ. ಗೌರವ್ ಸಿಂಗ್ ತಿಳಿಸಿದ್ದಾರೆ.