Thursday, 12th December 2024

ಜುಲೈ 1 ರಿಂದ ಗೃಹ ಬಳಕೆಗಾಗಿ ಉಚಿತ 300 ಯೂನಿಟ್‌ ವಿದ್ಯುತ್‌ ಪೂರೈಕೆ: ಮಾನ್ ಘೋಷಣೆ

ಚಂಡೀಗಢ: ಜುಲೈ 1 ರಿಂದ ಪಂಜಾಬ್‌ನಲ್ಲಿ ಗೃಹ ಬಳಕೆಗಾಗಿ ಉಚಿತ 300 ಯೂನಿಟ್‌ ವಿದ್ಯುತ್‌ ಪೂರೈಕೆ ಮಾಡು ವುದಾಗಿ ಆಮ್ ಆದ್ಮಿ ಪಕ್ಷ ಶನಿವಾರ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಭಗವಂತ ಮಾನ್ ಅಧಿಕಾರ ವಹಿಸಿಕೊಂಡ ತಿಂಗಳಲ್ಲೇ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಘೋಷಣೆಗೂ ಮುನ್ನ ಗುರುವಾರ ಮುಖ್ಯಮಂತ್ರಿ ಭಗವಂತ ಮಾನ್ ದೆಹಲಿಗೆ ತೆರಳಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಉಚಿತ ವಿದ್ಯುತ್ ಪೂರೈಕೆ ಯೋಜನೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.

ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ ಉಚಿತ 300 ಯೂನಿಟ್ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಶನಿವಾರ ಪಂಜಾಬ್‌ ಜನತೆಗೆ ತಾವು ನೀಡಿದ್ದ ಪ್ರಮುಖ ಭರವಸೆಯನ್ನು ನೇರವೇರಿಸುವುದಾಗಿ ಘೋಷಿಸಿದ್ದಾರೆ. ಜುಲೈ 1 ರಿಂದ ಪ್ರತಿ ಮನೆಯ ಗೃಹ ಬಳಕೆಗೆ ಉಚಿತವಾಗಿ 300 ಯೂನಿಟ್‌ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.

ಕಳೆದ ತಿಂಗಳು ಮುಖ್ಯಮಂತ್ರಿ ಭಗವಂತ ಮಾನ್ “ಮನೆ ಬಾಗಿಲಿಗೆ ಪಡಿತರ ಯೋಜನೆ”ಯನ್ನ ಜಾರಿಗೆ ತಂದಿದ್ದರು. ಇದು ಕೂಡ ತಾವು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಪ್ರಮುಖ ಭರವಸೆಯಲ್ಲಿ ಒಂದಾಗಿದೆ.

ಮಾರ್ಚ್ 10 ರಂದು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಇತಿಹಾಸ ನಿರ್ಮಿಸಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯನ್ನೇ ಧೂಳಿಪಟ ಮಾಡಿ ಅಧಿಕಾರದ ಗದ್ದುಗೆ ಏರಿತ್ತು.