Sunday, 15th December 2024

ಠಾಣೆ ಮೇಲೆ ಮುತ್ತಿಗೆ ಪ್ರಕರಣ: 3,000 ಜನರ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ: ಕೇರಳದ ವಿಳಿಂಜಮ್ ಪೊಲೀಸ್ ಠಾಣೆ ಮೇಲೆ ಮುತ್ತಿಗೆ ಹಾಕಿದ ಪ್ರಕರಣದಲ್ಲಿ 30 ಪೊಲೀಸರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿ ಇನ್ನೂ 3,000 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗಲಭೆ, ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿ ನಾಶಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸ ಲಾಗಿದೆ. ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ಗೆ ಸೇರಿದ ಪ್ರತಿಭಟನಾಕಾರರು ನಡೆಸಿದ ಹಿಂಸಾಚಾರದಲ್ಲಿ 85 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿಯಾಗಿದೆ ಎಂದು ಎಫ್ಐಆರ್ ಹೇಳಿದೆ.
ವಿಳಿಂಜಮ್ ಬಂದರು ಪ್ರವೇಶದ್ವಾರದ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಬೆನ್ನಲ್ಲೇ, ಪ್ರತಿಭಟನಾಕಾರರು ವಿಳಿಂಜಮ್ ಪೊಲೀಸ್ ಠಾಣೆ ಯನ್ನು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಹಿಂಸಾಚಾರ ಸಂಭವಿಸಿದೆ.

ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಐದಕ್ಕೂ ಹೆಚ್ಚು ಪೊಲೀಸ್ ವಾಹನ ಗಳಿಗೆ ಹಾನಿಯಾಗಿದ್ದು, ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಕರೆದಿದ್ದ ಆಂಬ್ಯುಲೆನ್ಸ್ಗಳನ್ನು ಪ್ರತಿಭಟನಾಕಾರರು ಆರಂಭದಲ್ಲಿ ತಡೆದರು.