Saturday, 23rd November 2024

ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್‌ ಫೋನ್‌ ವಶ

ಕೋಲ್ಕತ್ತಾ: ಮಾಲ್ಡಾ ಜಿಲ್ಲೆ ಹಾಗೂ ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ ಅಂದಾಜು 38 ಲಕ್ಷ ರೂ. ಮೌಲ್ಯದ 317 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದೆ.

ಬಾಂಗ್ಲಾದೇಶಕ್ಕೆ ಕಳ್ಳ ಸಾಗಣೆಯಾಗುತ್ತಿದ್ದ ಈ ಮೊಬೈಲ್‌ಗಳು ಪಾಗ್ಲಾ ನದಿಯಲ್ಲಿ ತೇಲುತ್ತಿದ್ದವು. ಪ್ಲಾಸ್ಟಿಕ್‌ ಕಂಟೇನರ್‌ಗಳಲ್ಲಿ ಮೊಬೈಲ್‌ಗಳನ್ನು ಹಾಕಿ ಬಾಳೆ ದಿಂಡಿಗೆ ಕಟ್ಟಿ ಪಾಲ್ಗಾ ನದಿಯಲ್ಲಿ ತೇಲಿ ಬಿಡಲಾಗಿತ್ತು. ಏಕಕಾಲದಲ್ಲಿ ಇಷ್ಟು ಪ್ರಮಾಣದ ಬಾಳೆ ದಿಂಡುಗಳು ತೇಲುತ್ತಿರುವುದನ್ನು ಕಂಡು ಅನುಮಾನ ವ್ಯಕ್ತಪಡಿಸಿ ದಾಗ, ಅದರಲ್ಲಿ ಮೊಬೈಲ್‌ ಫೋನ್‌ಗಳಿರುವುದು ಪತ್ತೆಯಾಗಿದೆ.

ದಕ್ಷಿಣ ಬಂಗಾಳ ಫ್ರಾಂಟಿಯರ್ 70 ಬೆಟಾಲಿಯನ್ ಸೈನಿಕರು ಬಾರ್ಡರ್ ಔಟ್ ಪೋಸ್ಟ್ ಲೋಧಿಯಾದಲ್ಲಿ ಪಾಗ್ಲಾ ನದಿಯಲ್ಲಿ ತೇಲುವ ಬಾಳೆ ದಿಂಡು ಗಳನ್ನು ಕಂಡಿದ್ದರು. ಅವುಗಳನ್ನು ಪರಿಶೀಲನೆ ಮಾಡಿದಾಗ, ಈ ಬಾಳೆ ದಿಂಡಿಗೆ ಕಟ್ಟಿದ್ದ ಪ್ಲಾಸ್ಟಿಕ್‌ ಕಂಟೇನರ್‌ಗಳು ಪತ್ತೆಯಾದವು. ಈ ಕಂಟೇನರ್‌ಗಳು ಬಾಂಗ್ಲಾದೇಶದ ಕಡೆಗೆ ಸಾಗುತ್ತಿದ್ದವು. ಎಲ್ಲಾ ಬಾಳೆ ದಿಂಡುಗಳನ್ನು ಮೇಲಕ್ಕೆತ್ತಿದಾಗ, ಅವುಗಳಲ್ಲಿ ಪಟ್ಟು 317 ಮೊಬೈಲ್‌ ಫೋನ್‌ಗಳು ಪತ್ತೆಯಾಗಿವೆ.

ಈ ಫೋನ್‌ಗಳು ಯಾರು ಕಳ್ಳಸಾಗಣೆ ಮಾಡುತ್ತಿದ್ದರು. ಯಾವ ಕಾರಣಕ್ಕಾಗಿ ಸಾಗಣೆ ಮಾಡುತ್ತಿದ್ದರು ಎನ್ನುವ ವಿವರ ತಿಳಿಯಬೇಕಿದೆ. ಈ ಎಲ್ಲಾ ಫೋನ್‌ಗಳು ವಿವಿಧ ಕಂಪನಿಗಳದ್ದಾಗಿವೆ. ಇದರ ಮೌಲ್ಯ 38 ಲಕ್ಷದ 83 ಸಾವಿರ ರೂಪಾಯಿ ಎಂದು ಅಂದಾಜಿಸ ಲಾಗಿದೆ.