Thursday, 12th December 2024

ಕೋವಿಡ್‌ ನಿಯಮ ಉಲ್ಲಂಘನೆ: 37 ಜನರ ಬಂಧನ

ಕೋಲ್ಕತ : ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತದಲ್ಲಿ, ಕೋವಿಡ್​ ನಿಯಮಾವಳಿಗಳನ್ನು ಉಲ್ಲಂಘಿಸಿ, ಫೈವ್​ ಸ್ಟಾರ್ ಹೋಟೆಲ್​ನಲ್ಲಿ ಪಾರ್ಟಿ ಮಾಡುತ್ತಿದ್ದ 37 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಮಧ್ಯರಾತ್ರಿಯ ವೇಳೆ ದ ಪಾರ್ಕ್​ ಎಂಬ ಫೈವ್​ ಸ್ಟಾರ್​ ಹೋಟೆಲ್​ನ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಡಿಜೆ ಸಂಗೀತದೊಂದಿಗೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಮಧ್ಯ ರಾತ್ರಿ ಪೊಲೀಸರು ನಡೆಸಿದ ದಾಳಿಯಲ್ಲಿ 37 ಜನರನ್ನು ಬಂಧಿಸಲಾಗಿದೆ. ಎರಡು ಕಾರುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಪಾರ್ಟಿಯ ಸ್ಥಳದಿಂದ ಗಾಂಜಾ, ಮದ್ಯದ ಬಾಟಲಿಗಳು ಮತ್ತು ಅತಿಥಿಗಳ ಪಟ್ಟಿ ಮುಂತಾದವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಜನಸಂಚಾರ ಮತ್ತು ಹೊರಾಂಗಣ ಚಟುವಟಿಕೆಗಳ ಮೇಲೆ ನಿರ್ಬಂಧ ಚಾಲ್ತಿಯಲ್ಲಿದೆ.