ನವದೆಹಲಿ: ಕೆನಡಾದಲ್ಲಿ 400 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ರದ್ದಾಗಿದ್ದು, ಇದಕ್ಕೆ ಕಾರ್ಮಿಕರು ನಡೆಸುತ್ತಿರುವ ಮುಷ್ಕರವೇ ಕಾರಣ ಎನ್ನಲಾಗಿದೆ. ಇದರಿಂದ ಸುಮಾರು 50000 ಕ್ಕೂ ಹೆಚ್ಚು ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ನಿರ್ವಹಣಾ ಕಾರ್ಮಿಕರ ಸಂಘ ಮುಷ್ಕರ ನಡೆಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ವೆಸ್ಟ್ ಜೆಟ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ವೆಸ್ಟ್‌ಜೆಟ್ ಕೆನಡಾದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದು, ಮುಷ್ಕರದಿಂದಾಗಿ 407 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದು ದೇಶದಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳಲ್ಲಿ 49,000 ಕ್ಕೂ ಹೆಚ್ಚು ಜನರ ಪ್ರಯಾಣದ ಮೇಲೆ ಪರಿಣಾಮ ಬೀರಿದೆ.
ಏರ್‌ಕ್ರಾಫ್ಟ್ ಮೆಕ್ಯಾನಿಕ್ಸ್ ಫ್ರಾಟರ್ನಲ್ ಅಸೋಸಿಯೇಷನ್ (AMFA) , US ಯೂನಿಯನ್ ಸಂಘಟನೆಯ ಸದಸ್ಯರು ಶುಕ್ರವಾರ ಸಂಜೆ ಮುಷ್ಕರವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದ್ದು, ವೆಸ್ಟ್‌ಜೆಟ್ ಅಧ್ಯಕ್ಷ ಡೆಡೆರಿಕ್ ಪೆನ್ ಅವರು ಪ್ರತಿಕ್ರಿಯೆ ನೀಡಿದ್ದು, ಕಂಪನಿಯು ಪ್ರತಿಭಟನೆಗೆ ಪ್ರತಿಕ್ರಿಯಿ ಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಸ್ಥಿರವಾದ ನೆಟ್‌ವರ್ಕ್ ರಚಿಸಲು ಪೂರಕವಾದ ಕೆಲಸ ಮಾಡುತ್ತಿದೆ ಎಂದು ಹೇಳಿದರು
. ಏರ್‌ಲೈನ್‌ನ ಸಿಇಒ ಅಲೆಕ್ಸಿಸ್ ವಾನ್ ಹೊಯೆನ್ಸ್‌ಬ್ರೂಚ್ ಅವರು, ಕೆನಡಾದಲ್ಲಿ ಮುಷ್ಕರ ಮಾಡಲು ಪ್ರಯತ್ನಿಸುತ್ತಿರುವ ಪರಿಸ್ಥಿತಿಗೆ ಯುಎಸ್ ಮೂಲದ ಒಕ್ಕೂಟವನ್ನು ನೇರವಾಗಿ ದೂಷಿಸಿದರು. ಸರ್ಕಾರದ ಮಧ್ಯಸ್ಥಿಕೆಯ ನಂತರ, ಒಕ್ಕೂಟದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ಪರಿಸ್ಥಿತಿ ಹಾಗೆಯೇ ಇದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುರುವಾರ ಸರ್ಕಾರ ಮಧ್ಯಸ್ಥಿಕೆಗೆ ಆದೇಶ ಹೊರಡಿಸಿತ್ತು. ಇದಾದ ನಂತರ, ಹಠಾತ್ ಮುಷ್ಕರದ ಘೋಷಣೆಯಿಂದಾಗಿ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಮೇಲೆ ಪರಿಣಾಮ ಬೀರಲಾರಂಭಿಸಿತು.
ಏರ್‌ಕ್ರಾಫ್ಟ್ ಮೆಕ್ಯಾನಿಕ್ಸ್ ಫ್ರಾಟರ್ನಲ್ ಅಸೋಸಿಯೇಷನ್ ಸಂಧಾನಕ್ಕೆ ಒಪ್ಪದ ಕಾರಣ, ಯೂನಿಯನ್ ಸದಸ್ಯರು ಶುಕ್ರವಾರ ಸಂಜೆ ಮುಷ್ಕರವನ್ನು ಪ್ರಾರಂಭಿಸಿದ್ದರು.