Friday, 20th September 2024

4054 ಮಸಾಲೆ ಮಾದರಿ ಪೈಕಿ, 474 ಮಾದರಿ ತಿನ್ನಲು ಯೋಗ್ಯವಲ್ಲ

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ 4054 ಮಸಾಲೆ ಮಾದರಿಗಳನ್ನ ಪರೀಕ್ಷಿಸಿದ್ದು, ಅವುಗಳಲ್ಲಿ 474 ಮಾದರಿ ಗಳು ತಿನ್ನಲು ಯೋಗ್ಯವಲ್ಲ ಎಂದು ಕಂಡುಬಂದಿದೆ.

ದೇಶದಲ್ಲಿ ಮಾರಾಟವಾಗುವ ಶೇ.12ರಷ್ಟು ಮಸಾಲೆ ಪದಾರ್ಥಗಳು ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳ ಪ್ರಕಾರ ಕಂಡುಬಂದಿಲ್ಲ.

ಮೇ ಮತ್ತು ಜುಲೈ ನಡುವೆ ನಡೆದ ಈ ತನಿಖೆಯ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆಯಲಾಗಿದೆ. ಏಪ್ರಿಲ್-ಮೇ 2024ರಲ್ಲಿ ಸಿಂಗಾಪುರ್ ಮತ್ತು ಹಾಂಗ್ ಕಾಂಗ್‌’ನಲ್ಲಿ ಮಸಾಲೆಗಳ ಗುಣಮಟ್ಟ ಮತ್ತು ನಿಷೇಧದ ಸುದ್ದಿಗಳ ಕುರಿತು ಪ್ರಶ್ನೆಗಳನ್ನು ಎತ್ತಿದಾಗ FSSAI ಈ ಪರೀಕ್ಷೆ ಪ್ರಾರಂಭಿಸಿದೆ.

ಆಹಾರ ಪ್ರಾಧಿಕಾರ FSSAI ತನ್ನ ಉತ್ತರದಲ್ಲಿ, ಪರೀಕ್ಷಿಸಿದ ಮಸಾಲೆಗಳ ಬ್ರಾಂಡ್ ವಿವರಗಳು ಲಭ್ಯವಿಲ್ಲ. ಆದ್ರೆ, ಗುಣಮಟ್ಟ ಮತ್ತು ಸುರಕ್ಷತಾ ಮಾನ ದಂಡಗಳನ್ನ ಪೂರೈಸದ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ. ಅದೇ ಸಮಯದಲ್ಲಿ, MDH ಮತ್ತು ಎವರೆಸ್ಟ್ ತಮ್ಮ ಉತ್ಪನ್ನ ಗಳು ಗ್ರಾಹಕರಿಗೆ ಸುರಕ್ಷಿತವೆಂದು ಹೇಳಿಕೊಂಡಿವೆ.

MDH ಮತ್ತು ಎವರೆಸ್ಟ್ ಮಸಾಲೆಗಳನ್ನ ಭಾರತಿ ಮಾರುಕಟ್ಟೆಯಲ್ಲಿ ಮತ್ತು ಪ್ರಪಂಚದಾದ್ಯಂತ ಮಾರಾಟ ಮಾಡಲಾಗುತ್ತದೆ.

ಏಪ್ರಿಲ್ 2024ರಲ್ಲಿ, ಸರ್ಕಾರವು MDH ಮತ್ತು ಎವರೆಸ್ಟ್ ನಾಲ್ಕು ಮಸಾಲೆಗಳನ್ನ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ನಿಷೇಧಿಸಿದ ನಂತರ, ಭಾರತ ಸರ್ಕಾರವು ಈಗ ಎಲ್ಲಾ ಕಂಪನಿಗಳ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಲು ಆಹಾರ ಆಯುಕ್ತರನ್ನ ಕೇಳಿದೆ. ಎರಡೂ ಕಂಪನಿಗಳ ಈ ಉತ್ಪನ್ನ ಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ‘ಎಥಿಲೀನ್ ಆಕ್ಸೈಡ್’ ಇರುವುದರಿಂದ ಅವುಗಳನ್ನ ನಿಷೇಧಿಸಲಾಗಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳ ಲಾಗಿದೆ.

ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲಾ ಪೌಡರ್ ಮತ್ತು ಕರಿ ಪೌಡರ್ – ಎಂಡಿಹೆಚ್ ಗುಂಪಿನ ಮೂರು ಮಸಾಲೆ ಮಿಶ್ರಣಗಳಲ್ಲಿ ಹೆಚ್ಚಿನ ಪ್ರಮಾಣದ ಎಥಿಲೀನ್ ಆಕ್ಸೈಡ್ ಕಂಡುಬಂದಿದೆ ಎಂದು ಹಾಂಗ್ ಕಾಂಗ್‌ನ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.