Saturday, 23rd November 2024

ನಾಳೆ 4ನೇ ಹಂತದ ಚುನಾವಣೆ: ಬಿಜೆಪಿಗೆ ನಿರ್ಣಾಯಕ

ಲಖನೌ: ಬಿಜೆಪಿಗೆ ಫೆ. 23ರಂದು ನಡೆಯುವ 4ನೇ ಹಂತದ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ.

ಮೊದಲ 2 ಹಂತಗಳ ಚುನಾವಣೆ ನಡೆದ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವಿದೆ. ಈ ಬಾರಿ ಸಮಾಜವಾದಿ ಪಕ್ಷ ಮತ್ತು ಜಾಟ್ ಸಮುದಾಯದ ಪಕ್ಷ ಎಂದೇ ಹೇಳಲಾಗುವ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿರುವುದರಿಂದ ಮೊದಲೆರಡು ಹಂತಗಳ ಮತದಾನದಲ್ಲಿ ಈ ಮೈತ್ರಿ ಮುನ್ನಡೆ ಸಾಧಿಸಬಹುದು ಎಂದು ಹೇಳಲಾಗುತ್ತಿದೆ.

3ನೇ ಹಂತದಲ್ಲಿ ಚುನಾವಣೆ ನಡೆದ 16 ಜಿಲ್ಲೆಗಳ 59 ಕ್ಷೇತ್ರಗಳು ಯಾದವ್ ಸಮುದಾಯದ ಪ್ರಭಾವ ಹೊಂದಿವೆ. ಹಾಗಾಗಿ 3ನೇ ಹಂತದಲ್ಲಿ ಸಮಾಜ ವಾದಿ ಪಕ್ಷ ಮುನ್ನಡೆ ಗಳಿಸಬಹುದು ಎಂಬ ಲೆಕ್ಕಾಚಾರ ಇದೆ. ಹೀಗೆ ಮೊದಲ ಮೂರೂ ಹಂತಗಳು ಆಶಾದಾಯಕವಾಗಿಲ್ಲದ ಕಾರಣಕ್ಕೆ

4ನೇ ಹಂತದಲ್ಲಿ 9 ಜಿಲ್ಲೆಗಳ 60 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸೋನಿಯಾ ಗಾಂಧಿ ಅವರ ಲೋಕಸಭಾ ಕ್ಷೇತ್ರ ರಾಯ್ ಬರೇಲಿ, ರಾಜನಾಥ್ ಸಿಂಗ್ ಅವರ ಲೋಕಸಭಾ ಕ್ಷೇತ್ರ ಲಕ್ನೋ, ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಅವರ ಪಿಲಿಭಿತ್, ಇತ್ತೀಚೆಗೆ ರೈತರ ಹತ್ಯಾಕಾಂಡ ನಡೆದ ಲಖಿಂಪುರ ಖೇರಿ, ಕೆಲ ದಿನಗಳ ಹಿಂದೆ ದಲಿತರ ನರಮೇಧ ನಡೆದ ಉನ್ನಾವೋ, ಫತೇಪುರ್ ಮತ್ತು ಬಂದಾ ಜಿಲ್ಲೆಗಳು ಇವೆ. 60 ಸ್ಥಾನಗಳ ಪೈಕಿ 16 ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಸಮಾಜವಾದಿ ಪಕ್ಷ 58 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.‌ ಬಿಜೆಪಿ 57 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷ ಅಪ್ನಾ ದಳಕ್ಕೆ 3 ಸ್ಥಾನ ಬಿಟ್ಟುಕೊಟ್ಟಿದೆ.

2021ರ ಅಕ್ಟೋಬರ್ 3ರಂದು ನಡೆದ ಲಖಿಂಪುರ ಖೇರಿ ರೈತರ ಹತ್ಯಾಕಾಂಡ ಪ್ರಕರಣ ಕೂಡ ಉತ್ತರ ಪ್ರದೇಶ ಚುನಾವಣೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ಘಟನೆ ನಡೆದ ತೆರಾಯ್ ಪ್ರದೇಶದಲ್ಲಿ. ಇಲ್ಲಿ ಕೂಡ 4ನೇ ಹಂತದಲ್ಲಿ ಮತದಾನ ನಡೆಯಲಿದೆ.