Saturday, 23rd November 2024

5ಜಿ ಸ್ಪೆಕ್ಟ್ರಮ್ ಹರಾಜು: ಐದನೇ ಸುತ್ತಿನ ಬಿಡ್ಡಿಂಗ್ ಇಂದು

ಮುಂಬೈ: 5ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನದ ಬಿಡ್ಡಿಂಗ್‌ ನಾಲ್ಕು ಸುತ್ತಿನಲ್ಲಿ ನಡೆದಿದ್ದು, ಐದನೇ ಸುತ್ತಿನ ಬಿಡ್ಡಿಂಗ್  ಬುಧವಾರ ಆರಂಭವಾಗಿದೆ. ಮೊದಲ ದಿನದ ಹರಾಜಿನಲ್ಲಿ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ.

ಮುಕೇಶ್ ಅಂಬಾನಿ, ಸುನೀಲ್ ಭಾರ್ತಿ ಮಿತ್ತಲ್ ಹಾಗೂ ಗೌತಮ್ ಅದಾನಿ 5ಜಿ ಸ್ಪೆಕ್ಟ್ರಮ್ ಹರಾಜನ್ನು ಗೆಲ್ಲುವ ಸಲುವಾಗಿ 1.45 ಟ್ರಿಲಿಯನ್ ಬಿಡ್ಡಿಂಗ್ ಮಾಡಿದ್ದಾರೆ. ಬಿಡ್ಡಿಂಗ್‌ಗಲ್ಲಿ ಈ ದಿಗ್ಗಜರ ನೇತೃತ್ವದ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ ಭಾಗಿಯಾಗಿದೆ. ಈ ಪೈಕಿ ಅದಾನಿ ಡೇಟಾ ನೆಟ್‌ವರ್ಕ್‌ ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಸಂಸ್ಥೆಯಾಗಿದೆ.

2016 ಮತ್ತು 2021ರಲ್ಲಿ ನಡೆದಿದ್ದ ಹರಾಜಿನಲ್ಲಿ ಯಾವುದೇ ಸಂಸ್ಥೆಯು 700 MHz ಬ್ಯಾಂಡ್‌ಗೆ ಬಿಡ್ಡ್ ಮಾಡಿರಲಿಲ್ಲ. ಆದರೆ ಈ ಹರಾಜಿನಲ್ಲಿ 700 MHz ಬ್ಯಾಂಡ್‌ಗೂ ಬಿಡ್ಡ್ ನಡೆದಿದೆ. 700 MHz ಬ್ಯಾಂಡ್‌ಗೆ 39,270 ಕೋಟಿ ರೂಪಾಯಿ ಬಿಡ್ಡಿಂಗ್ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. 2015ರಲ್ಲಿ ನಡೆದಿದ್ದ ಬಿಡ್ಡಿಂಗ್ ವೇಳೆ ಸುಮಾರು 1.09 ಟ್ರಿಲಿಯನ್ ಆದಾಯ ಸಂಗ್ರಹ ವಾಗಿತ್ತು.

ಮೊದಲ ದಿನವೇ 1.45 ಟ್ರಿಲಿಯನ್ ಬಿಡ್ಡಿಂಗ್ ನಡೆದಿದೆ. ಆರೋಗ್ಯಕರವಾಗಿ ಬಿಡ್ಡರ್‌ಗಳು ಸ್ಪರ್ಧಿಸುತ್ತಿದ್ದಾರೆ.

ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜು ಇದಾಗಿದೆ. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ.