ನವದೆಹಲಿ: ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ 2023ರ ದಿನಾಂಕಗಳನ್ನು ಚುನಾ ವಣಾ ಆಯೋಗವು ಪ್ರಕಟಿಸಿದೆ.
ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಮತದಾನ, ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 23 ರಂದು ರಾಜಸ್ಥಾನ ಮತ್ತು ನವೆಂಬರ್ 30 ರಂದು ತೆಲಂಗಾಣ ವೋಟಿಂಗ್ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, 40 ದಿನಗಳಲ್ಲಿ ಎಲ್ಲಾ 5 ರಾಜ್ಯಗಳಿಗೆ ಭೇಟಿ ನೀಡಿ ರಾಜಕೀಯ ಪಕ್ಷಗಳು, ಕೇಂದ್ರ ಮತ್ತು ರಾಜ್ಯ ಜಾರಿ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗಿದೆ” ಎಂದು ತಿಳಿಸಿದರು.
”ಮಿಜೋರಾಂನಲ್ಲಿ ಒಟ್ಟು ಮತದಾರರು 8.52 ಲಕ್ಷ, ಛತ್ತೀಸ್ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಮತ್ತು ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ. ಸುಮಾರು 60 ಲಕ್ಷ ಮೊದಲ ಬಾರಿಗೆ ಮತದಾರರು (18-19 ವರ್ಷ) 5 ರಾಜ್ಯಗಳ ಚುನಾ ವಣೆಗಳಲ್ಲಿ ಭಾಗವಹಿಸುತ್ತಾರೆ. ಅರ್ಹತಾ ದಿನಾಂಕಗಳ ತಿದ್ದುಪಡಿಯಿಂದಾಗಿ 15.39 ಲಕ್ಷ ಯುವ ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಯುವ ಮತದಾರರನ್ನು ಪ್ರೇರೇಪಿಸಲು, 2,900ಕ್ಕೂ ಹೆಚ್ಚು ಮತಗಟ್ಟೆಗಳನ್ನು ಯುವಕರು ನಿರ್ವಹಿಸುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.
1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪನೆ: ”ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ತೆಲಂಗಾಣ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಮುಂಬರುವ 2023 ರ ವಿಧಾನಸಭಾ ಚುನಾವಣೆಗೆ 679 ವಿಧಾನಸಭಾ ಕ್ಷೇತ್ರಗಳಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
17,734 ಮಾದರಿ ಮತಗಟ್ಟೆಗಳಿದ್ದು, 621 ಮತಗಟ್ಟೆಗಳನ್ನು ಪಿಡಬ್ಲ್ಯೂಡಿ ಸಿಬ್ಬಂದಿ ನಿರ್ವಹಿಸುತ್ತಾರೆ. 8,192 ಪಿಎಸ್ ಮಹಿಳೆಯರು ಕಮಾಂಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ” ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.