Sunday, 15th December 2024

ಜೋಧಪುರದಿಂದ ಅಯೋಧ್ಯೆ ತಲುಪಿದ 600 ಕೆಜಿ ಶುದ್ಧ ನಾಟಿ ತುಪ್ಪ

ಅಯೋಧ್ಯಾ: ಭಗವಾನ್ ಶ್ರೀರಾಮ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ 600 ಕೆಜಿಯಷ್ಟು ಪರಿಶುದ್ಧ ತುಪ್ಪ ಗುರುವಾರ ಅಯೋಧ್ಯೆಗೆ ಬಂದು ತಲುಪಿದೆ.

ಶ್ರೀರಾಮ ಜನ್ಮ ಭೂಮಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಜ. 22 ರಂದು ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಭರದಿಂದ ಸಾಗಿವೆ. ಜೋಧ್‌ಪುರದ ಹಸುವಿನ ಶುದ್ಧ ತುಪ್ಪ ಕೂಡ ಸೇರಿದೆ. ಜೋಧಪುರದಿಂದ ತಂದ ಈ ತುಪ್ಪದಿಂದಲೇ ರಾಮನ ಮೊದಲ ಆರತಿ ನಡೆಯಲಿದೆ!

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಹಾಗೂ ಖಜಾಂಚಿ ಗೋವಿಂದ ದೇವಗಿರಿ ಮಹಾರಾಜ್‌ ಅವರು ಆರತಿ ಮಾಡಿ ಎತ್ತಿನ ಬಂಡಿಗಳ ಮೂಲಕ ತಂದ ಹಸುವಿನ ತುಪ್ಪವನ್ನು ಸ್ವಾಗತಿಸಿದರು. ಗೋಘೃತ್ ಪಾದಯಾತ್ರೆ ಎಂದು ಕರೆಯಲಾಗುವ ಈ ಎತ್ತಿನ ಬಂಡಿ ಪ್ರಯಾಣವನ್ನು ನವೆಂಬರ್ 27 ರಂದು ಜೋಧಪುರ ರಾಜಸ್ಥಾನದಿಂದ ಆರಂಭಿಸಲಾಗಿತ್ತು.

ಅಯೋಧ್ಯೆಗೆ ಬಂದ 600 ಕೆಜಿ ಹಸುವಿನ ತುಪ್ಪನಮ್ಮ ಧಾರ್ಮಿಕ ಪಂಥದಲ್ಲಿ ಗೋವಿನ ತುಪ್ಪವನ್ನು ಅತ್ಯಂತ ಪವಿತ್ರ ಎಂದು ಕರೆಯುತ್ತೇವೆ. ಈ ತುಪ್ಪದಿಂದ ಶ್ರೀರಾಮನ ಜೀವನಾಭಿಷೇಕ, ಯಾಗ, ಹವನ ಇತ್ಯಾದಿಗಳನ್ನು ನಡೆಸಲಾಗುವುದು. ಇದಲ್ಲದೇ ಕಾಂಬೋಡಿಯಾದಿಂದ ರಾಮ ಲಲ್ಲಾ ಸೇವೆಗೆ ಅರಿಶಿನ ಕೂಡ ಬಂದಿದೆ. ಭಗವಾನ್ ಶ್ರೀರಾಮನ ಸೇವೆಗಾಗಿ ನಾವು ಅದನ್ನು ಸ್ವೀಕರಿಸಿದ್ದೇವೆ. ಭಗವಾನ್ ರಾಮನ ಸೇವೆಗಾಗಿ ಪ್ರಪಂಚದಾದ್ಯಂತ ಅರ್ಪಣೆಗಳನ್ನು ಸಲ್ಲಿಸಲಾಗುತ್ತಿದೆ. ಇದು ಅತ್ಯಂತ ಮಂಗಳಕರ ಸಂಕೇತ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಗೋವಿಂದ ದೇವ ಗಿರಿ ಮಹಾರಾಜ್ ಹೇಳಿದರು.