Friday, 22nd November 2024

7 ಕೋಟಿ ರೂ. ಮುಖಬೆಲೆಯ ನಕಲಿ ಕರೆನ್ಸಿ ವಶ

ಮುಂಬೈ : ಏಳು  ಜನರನ್ನು ಬಂಧಿಸಿ ಅವರಿಂದ 7 ಕೋಟಿ ರೂಪಾಯಿ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆಯಲ್ಲಿ ತೊಡಗಿರುವ ಅಂತರರಾಜ್ಯ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದ ಮುಂಬೈ ಅಪರಾಧ ವಿಭಾಗ ಘಟಕದ ಪೊಲೀಸರು ಕಾರ್ಯಾಚರಣೆಗೆ ಮುಂದಾ ಗಿದ್ದಾರೆ.

ಚೆಕ್ ಪೋಸ್ಟ್ ಗಳಲ್ಲಿ ಅಲರ್ಟ್ ಆದ ಪೊಲೀಸರು ಜನವರಿ 25 ರಂದು ದಹಿಸರ್ ಉಪನಗರದ ಚೆಕ್ ಪೋಸ್ಟ್‌ನಲ್ಲಿ ಅನುಮಾನಸ್ಪದ ಕಾರನ್ನು ತಡೆದು ವಿಚಾರಿಸಿದಾಗ ಕಳ್ಳರು ಎಂದು ಖಚಿತ ವಾಗಿದೆ. ಕಾರಿನಲ್ಲಿದ್ದ 4 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ‌.

ಕಾರನ್ನು ಪರಿಶೀಲಿಸಿದಾಗ 5 ಕೋಟಿ ಮುಖಬೆಲೆಯ 250 ಕಟ್ಟುಗಳ ನಕಲಿ ನೋಟುಗಳ (2,000 ರೂ. ಮುಖಬೆಲೆ) ಬ್ಯಾಗ್ ಪತ್ತೆಯಾಗಿದೆ. ಕಾರಿನಲ್ಲಿದ್ದ ನಾಲ್ವ ರನ್ನ ವಿಚಾರಿಸಿದ ಪೊಲೀಸರಿಗೆ ಇವರ ಇನ್ನುಳಿದ ಮೂವರು ಸಹಾಯಕರ ಬಗ್ಗೆ ತಿಳಿದುಬಂದಿದೆ. ಖಚಿತ ಮಾಹಿತಿ ಪಡೆದ ನಂತರ ಪೊಲೀಸರ ತಂಡವೊಂದು ಅಂಧೇರಿಯಲ್ಲಿರುವ ಹೋಟೆಲ್‌ ಮೇಲೆ ದಾಳಿ ನಡೆಸಿ ಇತರ ಮೂವರನ್ನು ಬಂಧಿಸಿದೆ.‌ ಅವರಿಂದ 2 ಕೋಟಿ ರೂಪಾಯಿ ಮುಖಬೆಲೆಯ 100 ಕಟ್ಟುಗಳ ನಕಲಿ ನೋಟುಗಳನ್ನು ( 2,000 ರೂ. ಮುಖಬೆಲೆ)ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ, ಒಂದು ಲ್ಯಾಪ್‌ಟಾಪ್, ಏಳು ಮೊಬೈಲ್ ಫೋನ್‌ ಗಳು, 28,170 ರೂಪಾಯಿ ಅಸಲಿ ಕರೆನ್ಸಿ, ಆಧಾರ್ ಹಾಗೂ ಪ್ಯಾನ್ ಕಾರ್ಡ್‌ಗಳು, ಡ್ರೈವಿಂಗ್ ಲೈಸೆನ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ತಂಡವು ಹಲವು ದಿನಗಳಿಂದ ನಕಲಿ ನೋಟುಗಳನ್ನು ಮುದ್ರಿಸಿ ಹಂಚುವ ದಂಧೆ ನಡೆಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಸಂಗ್ರಾಮಸಿಂಗ್ ನಿಶಾಂದರ್ ತಿಳಿಸಿದ್ದಾರೆ. ಆರೋಪಿಗಳನ್ನು ಜ.31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.